ಬೆಂಗಳೂರು : ನಮ್ಮ ಇಲಾಖೆಯಲ್ಲಿ ನೇಮಕಾತಿ ಒಂದು ಸಮಸ್ಯೆ ಇತ್ತು, ಇದೀಗ 750 ಜನರ ನೇಮಕಾತಿಗೆ ಅನುಮೋದನೆ ಕೊಟ್ಟಾಗಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡ್ಮೂರು ಸಭೆ ಮಾಡಿದ್ದೇವೂ, ಇವತ್ತು ಕೂಡ ಇಲಾಖೆಯ ಅಧಿಕಾರಿಗಳ ಜೊತೆಯು ಸಭೆ ಮಾಡಿದ್ದೇವೆ. 100 ಕೃಷಿ ಅಧಿಕಾರಿಗಳು ಹಾಗೂ 650 ಸಹಾಯಕ ಕೃಷಿ ಅಧಿಕಾರಿಗಳನ್ನ ನೇಮಕಾತಿ ಮಾಡಿಕೊಳ್ಳಲು ತಿರ್ಮಾನಿಸಿದ್ದೇವೆ. ಈಗಾಗಲೇ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಯಿಂದಲೂ ಅನುಮೋದನೆ ಕೊಡಲಾಗಿದೆ. ಜೊತೆಗೆ 582 ಹುದ್ದೆಗಳಿಗೆ ಮುಂಬಡ್ತಿ ಕೊಟ್ಟಿದ್ದು, ಈ ಮೂಲಕ ಅಧಿಕಾರಿಗಳಿಗೆ ಉತ್ಸಾಹ ತುಂಬಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇನ್ನು 223 ತಾಲೂಕುಗಳನ್ನ ಬರಗಾಲ ಎಂದು ಘೋಷಣೆ ಮಾಡಿದಾಗ ರೈತರಿಗೆ ಕೃಷಿ ಇಲಾಖೆ ಸಹಾಯ ಮಾಡಲು ನಿಂತಿದೆ. 200 ಕೋಟಿ ವೆಚ್ಚದಲ್ಲಿ 10 ಸಾವಿರ ಕೃಷಿ ಹೊಂಡ ಮಾಡಿದ್ದೇವೆ. ಕೃಷಿಯಲ್ಲಿ ಯಾಂತ್ರಿಕತೆಯನ್ನು ಪ್ರೋತ್ಸಾಹಿಸಲು 63, 785 ಫಲಾನುಭವಿಗಳಿಗೆ 284.92 ಕೋಟಿ ರೂ. ಸಹಾಯಧನ ಕೊಟ್ಟಿದ್ದೇವೆ. ರೈತರಿಗೆ ಯಂತ್ರೋಪಕರಣ ಪಡೆದುಕೊಳ್ಳಲು ಸರ್ಕಾರ ಮುಂದಾಗಿದ್ದು, 100 ಹೈಟೆಕ್ ಹಾರ್ವೆಸ್ಟರ್ ಹಬ್ಗೆ 50 ಕೋಟಿಗಳ ಅನುದಾನ ಒದಗಿಸಲಾಗಿದೆ. ನಾನು ಮತ್ತು ಕೃಷ್ಣ ಬೈರೇಗೌಡರು ದೆಹಲಿಗೆ ಹೋಗಿ ಅಧಿಕಾರಿಗಳು, ಮಂತ್ರಿಗಳನ್ನ ಭೇಟಿ ಮಾಡಿದ್ದೇವೆ. ಇನ್ನು ನಮಗೆ ಕೇಂದ್ರದಿಂದ ಪ್ರತಿಫಲ ಸಿಕ್ಕಿಲ್ಲ, ಆದ್ದರಿಂದ ರೈತರಿಗೆ ಬೆಳೆ ವಿಮೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ ಎಂದರು.