ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಿಎಂ ವಿರುದ್ಧ ದೂರು ನೀಡಿರುವ ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರಿನಲ್ಲಿ ಆಗ್ರಹ ಮಾಡಿದ್ದಾರೆ.
ಪ್ರತಿನಿಧಿ ನ್ಯೂಸ್ ಜೊತೆ ಮಾತನಾಡಿದ ಅವರು, ನಿನ್ನೆಯಷ್ಟೇ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜನತಾ ಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚಿಸಿದೆ. ಆದರೆ ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಯುವ ಅನುಮಾನವಿದೆ. ತನಿಖೆಯ ಮೇಲೆ ಸಿದ್ದರಾಮಯ್ಯ ಪ್ರಭಾವ ಬೀರುವ ಸಾಧ್ಯತೆಯೂ ಹೆಚ್ಚಾಗಿದೆ. ಹಾಗಾಗಿ ಲೋಕಾಯುಕ್ತ ತನಿಖೆಯ ಬದಲು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ಪರಿಣಾಮ ನನಗೆ ಬೆದರಿಕೆ ಇದೆ, ಹಾಗಾಗಿ ಪೊಲೀಸ್ ರಕ್ಷಣೆ ಕೊಡಿ ಎಂದು ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ಬಳಿಕ ನನಗೆ ಜೀವ ಬೆದರಿಕೆ ಇದೆ, ಹಾಗಾಗಿ ನನಗೆ ರಕ್ಷಣೆ ಕೊಡಿ ಎಂದು ಪೊಲೀಸ್ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿದ್ದೇನೆ. ಮನವಿ ಸಲ್ಲಿಸಿ ಒಂದು ತಿಂಗಳಾದರೂ ಪೊಲೀಸ್ ಇಲಾಖೆ ನನಗೆ ರಕ್ಷಣೆ ನೀಡಿಲ್ಲ. ಏಕೆಂದರೆ ಪೊಲೀಸ್ ಇಲಾಖೆ ಸಿದ್ದರಾಮಯ್ಯ ಪರವಿದೆ. ಪೊಲೀಸರು ರಕ್ಷಣೆ ಕೊಡದಿದ್ದರೂ ನಾನು ಹೆದರುವುದಿಲ್ಲ. ನನಗೆ ಇಡೀ ರಾಜ್ಯದ ಜನರ ರಕ್ಷಣೆ ಇದೆ. ಸಿದ್ದರಾಮಯಯ್ಯ ವಿರುದ್ಧ ಕಾನೂನು ಹೋರಾಟ ಮುಂದುವರೆಸುತ್ತೇನೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ಹೇಳಿದರು.