ಬೆಂಗಳೂರು, ಮಾರ್ಚ್ 5: ಮಹಾ ಶಿವರಾತ್ರಿ ಮತ್ತು ವಾರಾಂತ್ಯದ ಪ್ರಯಾಣಿಕರ ದಟ್ಟಣೆ ಹಾಗೂ ಬೇಡಿಕೆಯನ್ನು ಪೂರೈಸಲು ಮಾರ್ಚ್ 7 ಮತ್ತು 10 ರ ನಡುವೆ ಬೆಂಗಳೂರಿನಿಂದ ವಿವಿಧ ನಗರಗಳಿಗೆ 1,500 ಹೆಚ್ಚುವರಿ ಬಸ್ ಸೇವೆ ಒದಗಿಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೋಮವಾರ ತಿಳಿಸಿದೆ. ಅದೇ ರೀತಿ ಮಾರ್ಚ್ 10 ಮತ್ತು 11ರಂದು ವಾಪಸ್ ಬರುವವರಿಗಾಗಿ ವಿವಿಧ ನಗರಗಳಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದಲೂ ವಿಶೇಷ ಬಸ್ಗಳು ಕಾರ್ಯಾಚರಿಸಲಿವೆ.
ಈ ಹೆಚ್ಚುವರಿ ವಿಶೇಷ ಬಸ್ಸುಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮತ್ತಿತರ ಕಡೆಗಳಿಗೆ ಸಂಚರಿಸಲಿವೆ.