2019ರ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರ ಇಡೀ ದೇಶದಲ್ಲಿಯೇ ಸದ್ದು ಮಾಡಿತ್ತು. ಈಗ ಮತ್ತೆ ಆ ಎಲ್ಲಾ ಲಕ್ಷಣಗಳು ರಾಜ್ಯ ರಾಜಕಾರಣದಲ್ಲಿ ಕಾಣಿಸುತ್ತಿವೆ. ಹೌದು…ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಬಹುತೇಕ ಖಚಿತವಾಗಿದ್ದು, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ತನ್ನ ತೆಕ್ಕೆಗೆ ನೀಡುವಂತೆ ಬಿಜೆಪಿಗೆ ಕೇಳಿದೆ. ಈ ಹಿನ್ನೆಲೆಯಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮೈತ್ರಿ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನು ಇದರ ಮಧ್ಯೆ ಮಂಡ್ಯ ಗೌಡ್ತಿ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಂಡ್ಯ ಕ್ಷೇತ್ರದ ಸಮಸ್ಯೆ ಜೊತೆ ಜಿಲ್ಲಾ ರಾಜಕಾರಣದ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇಂದು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸುಮಲತಾ ಅಂಬರೀಶ್ ಅವರು 73ನೇ ಜನ್ಮ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ನಡೆದ G20 ಶೃಂಗಸಭೆಯ ಯಶಸ್ಸಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಲ್ಲದೇ ಇದೆ ಸಮಯದಲ್ಲಿ ಮಂಡ್ಯ ಕ್ಷೇತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.