ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಇಂದು (ಸೆ.21) ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ದೆಹಲಿಗೆ ತೆರಳಿದ್ದು, ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಇಂದು ರಾತ್ರಿ ವೇಳೆ ಮೈತ್ರಿ ಮಾತುಕತೆ ಮುಗಿಯಲಿದ್ದು, ನಾಳೆ ದೆಹಲಿಯಲ್ಲಿ ಉಭಯ ಪಕ್ಷಗಳ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಇದರ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಸಹ ಮೈತ್ರಿಗೆ ಪೆಟ್ಟು ನೀಡಲು ಆಪರೇಷನ್ ಹಸ್ತ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದು, ಇದಕ್ಕೆ ಹೈಕಮಾಂಡ್, ರಾಜ್ಯ ಕಾಂಗ್ರೆಸ್ ನಾಯಕರಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ನಿನ್ನೆ(ಸೆ 20) ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ್ದು, ಲೋಕಸಭಾ ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಮಹತ್ವ ಚರ್ಚೆ ನಡೆಸಿದರು. ಅಲ್ಲದೇ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಇಚ್ಛಿಸಿರುವ 15 ನಾಯಕರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಇನ್ನು ಇದೇ ವೇಳೆ ಮೈತ್ರಿಗೆ ಪೆಟ್ಟು ನೀಡಲು ಆಪರೇಶನ್ ಹಸ್ತಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
ಜೆಡಿಎಸ್ ಹಾಗೂ ಬಿಜೆಪಿಯ ನಾಯಕರು ಅವರಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರುವವರಿದ್ದರೆ ಸೇರಿಸಿಕೊಳ್ಳಿ. ಲೋಕಸಭಾ ಚುನಾವಣೆಗೆ ಲಾಭ ಆಗುವ ರೀತಿ ಆಪರೇಷನ್ ಹಸ್ತ ಮಾಡಬೇಕು ಎಂದು ಹೈಕಮಾಂಡ್, ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.