ಕನ್ನಡ ನಾಡಿನ ಜೀವನದಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಆಗ್ರಹಿಸಿ ರಾಜ್ಯಾದ್ಯಂತ ಕಳೆದ 15 ದಿನಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಇಂದು ಬೆಂಗಳೂರು ಬಂದ್ ಮಾಡಲಾಗಿದ್ದು, ವಿವಿಧ ಸಂಘಟನೆಗಳಿಂದ ತೀವ್ರ ಹೋರಾಟ ಮಾಡಲಾಗುತ್ತಿದೆ. ಇತ್ತ ಮನೆಯಲ್ಲಿ ಕುಳಿತುಕೊಂಡೇ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿಕೊಂಡ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಕನ್ನಡದ ನೆಲ, ಜಲ ಭಾಷೆ ಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಬೀದಿಗಿಳಿದು ಹೋರಾಟ ಮಾಡುವಂತೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದ ಎಕ್ಸ್ (ಹಳೆಯ ಟ್ವಿಟರ್), ಫೇಸ್ಬುಕ್ಗಳಲ್ಲಿ ಪೋಸ್ಟ್ ಹಾಕಿಕೊಂಡಿರುವ ಸುದೀಪ್ ಹೀಗೆ ಬರೆದುಕೊಂಡಿದ್ದಾರೆ. ಸಮಸ್ತ ಕನ್ನಡ ಜನತೆಗೆ ನಮಸ್ಕಾರ; ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ರೈತರು ಹೋರಾಟ ನೆಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ ಭಾಷೆ ಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಮುಂಗಾರುಮಳೆಯ ಅಭಾವದಿಂದ ರೈತರಿಗೆ ಜನತೆಯ ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ.
ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ. ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಂತ್ರಜ್ಞ ರು ಕೂಡಲೇ ಟ್ರಬಿನಲ್ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕ ದ ಬರ ಪರಿಸ್ಥಿತಿಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ. ಹಿಂದಿನ ಕೆಲವು ಮುಖ್ಯಮಂತ್ರಿಗಳಂತೆಯೇ ನಮ್ಮ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ತಮಿಳುನಾಡಿನ ಮುಖ್ಯಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ.