ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳು ಭೀಕರ ಬರದಿಂದ ಕಂಗೆಟ್ಟಿವೆ. ಕೇಂದ್ರ ಬರ ಅಧ್ಯಯನ ತಂಡ ಅಧ್ಯಯನ ಮಾಡಿ ವಾಸ್ತವಿಕತೆಯ ವರದಿ ನೀಡಿದ್ದರೂ ಈವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರ ಬಿಡುಗಡೆಯಾಗಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಜಗತ್ತಿನ ಕಷ್ಟ-ದುಃಖಗಳೆಲ್ಲ ಮಿಡಿಯುವ ನಿಮ್ಮ ವಿಶಾಲ ಹೃದಯ ಕನ್ನಡಿಗರ ಬಗ್ಗೆ ಇಷ್ಟು ಕಟುಕವಾಗಿರುವುದು ಯಾಕೆ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ 2019ರಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ರಾಜ್ಯ ಸಾವು ನೋವಿನಲ್ಲಿ ಮುಳುಗಿತು. ಲಕ್ಷಾಂತರ ಕುಟುಂಬಗಳು ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿ ಪಾಲಾದವು, ಆದರೂ ನೀವು ಕರ್ನಾಟಕಕ್ಕೆ ಬರಲಿಲ್ಲ. ರಾಜ್ಯದ ಜನರಿಗಾದ ಅಪಾರ ನಷ್ಟಕ್ಕೆ ಕೇಂದ್ರದ ನೆರವಿನ ಮೊರೆ ಹೋದರೆ ಮತ್ತೆ ಕನ್ನಡಿಗರಿಗೆ ಸಿಕ್ಕಿದ್ದು ಬಿಡಿಗಾಸು ಮಾತ್ರ. ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆಯಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಎಂದು ಪ್ರಶ್ನೆ ಮಾಡಿದ್ದಾರೆ.