ನನ್ನ ಬಗ್ಗೆ ಪದೇ ಪದೇ ಹಗುರ ಮಾತನಾಡಿದರೆ ಪರಿಣಾಮ ನೆಟ್ಟಗಿರದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಮ್ಮ ರಾಜಕೀಯ ಎದುರಾಳಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡಗೆ ಗುಟುರು ಹಾಕಿದ್ದಾರೆ. ಹೊನ್ನಾಳಿ ಕ್ಷೇತ್ರದ ವಿವಿಧೆಡೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ರೇಣುಕಾಚಾರ್ಯ ಕಾಂಗ್ರೆಸ್ ಸೇರಲು ತನ್ನ ವಿರೋಧವಿದೆ ಎಂದ ಶಾಂತನಗೌಡರ ಮನೆ ಬಾಗಿಲಿಗೆ ನಾನೇನು ಅರ್ಜಿ ಹಾಕಿಕೊಂಡು, ಹೋಗಿದ್ದೀನಾ ಎಂದು ಪ್ರಶ್ನಿಸಿದರು. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ.
ಬಿಜೆಪಿಯಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಕಾಂಗ್ರೆಸ್ ಸೇರಲು ನಾನು ಅರ್ಜಿ ಹಾಕಿಲ್ಲ. ಯಾರ ಮನೆ ಬಾಗಿಲನ್ನೂ ತುಳಿದಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಎಸ್ಸೆಸ್ ಮಲ್ಲಿಕಾರ್ಜುನ, ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ, ಇತರರನ್ನು ಭೇಟಿಯಾಗಿದ್ದು ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಹೊರತು ಬೇರೆ ಯಾವುದಕ್ಕೂ ಅಲ್ಲ ಎಂದು ಹೇಳಿದರು.