ಮೈಸೂರು: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ನಿಯತ್ರಿಸುವ ಕುರಿತು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ. ಪಟಾಕಿಗಳ ಸಿಡಿತದಿಂದ ಉಂಟಾಗುವ ಶಬ್ಧ ಹಾಗು ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆ ಹಿನ್ನೆಲೆಯಲ್ಲಿ ಹಲವು ನಿಯಮ ಜಾರಿ ಮಾಡಿದೆ. ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಗೆ ನಿಷೇಧ ಹೇರಿದೆ. ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಜೊತೆಗೆ ಕ್ಯೂ ಅರ್ ಕೋಡ್, ಸದರಿ ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿಯಲ್ಲ ಎಂದು ಹೇಳಿದೆ. ಒಂದು ವೇಳೆ ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮತ್ತು ಬಳಕೆ ಮಾಡಿದರೇ ಕ್ರಮ ಕೈಗೊಳ್ಳಲಾಗುವುದು ಎಂದಿದೆ.
ಪಟಾಕಿ ವ್ಯಾಪಾರದ ಮಳಿಗೆ ಗೋದಾಮಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ
ಜಿಲ್ಲೆಯ ಪಟಾಕಿ ವ್ಯಾಪಾರದ ಮಳಿಗೆ ಗೋದಾಮಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಾರಾಟ ಮಳಿಗೆ ದಾಸ್ತಾನು ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ 20ಕ್ಕೂ ಹೆಚ್ಚು ಅಗ್ನಿ ನಂದಿಸುವ ಸಾಧನ ಇರಿಸಲಾಗಿದೆ. ಇದರ ಜೊತೆಗೆ ಬಕೆಟ್ನಲ್ಲಿ ಮರಳು ನೀರು ಸಂಗ್ರಹಣೆ ಮಾಡಲಾಗಿದೆ. 10 ಆಟೋಮ್ಯಾಟಿಕ್ ಅಗ್ನಿ ನಂದಿಸುವ ಸಾಧನ, 10 ಮ್ಯಾನ್ಯುಯಲ್ ಅಗ್ನಿ ನಂದಿಸುವ ಸಾಧನ, 40 ಡಿಗ್ರಿ ಉಷ್ಣಾಂಶ ತಾಗಿದರೆ ಆಟೋಮ್ಯಾಟಿಕ್ ಆಗಿ ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಲಾಗಿದೆ. ಬೆಂಕಿ ಅವಘಡ ಸಂಭವಿಸಿದರೆ ಯಾವ ರೀತಿ ನಂದಿಸಬೇಕೆಂಬುವುದರ ಬಗ್ಗೆ ಪ್ರತಿ ಸಿಬ್ಬಂದಿಗೂ ಅಗ್ನಿಶಾಮಕ ಸಿಬ್ಬಂದಿಯಿಂದ ತರಬೇತಿ ನೀಡಲಾಗಿದೆ.