ರಾಜ್ಯವು ತೀವ್ರ ಬರಗಾಲ, ವಿದ್ಯುತ್ ಕ್ಷಾಮದಿಂದ ಬಳಲುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಐಷಾರಾಮಿ ಜೀವನದ ಮೂಲಕ ಶೋಕಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಗೆ ಹೊಸದಾಗಿ ಕಾನ್ಫರೆನ್ಸ್ ಹಾಲ್ ಮಾಡಿಕೊಂಡಿದ್ದಾರೆ. ಅದಕ್ಕೆ ಮೂರು ಕೋಟಿ ರು. ಜನರ ತೆರಿಗೆ ಹಣ ಖರ್ಚು ಮಾಡಿದ್ದಾರೆ ಎಂದು ಆಪಾದಿಸಿದರು.
ಜತೆಗೆ, ಆ ನಿವಾಸಕ್ಕೆ 1.90 ಕೋಟಿ ರು. ಬೆಲೆ ಬಾಳುವ ‘ಸ್ಟ್ಯಾನ್ಲಿʼ ವಿದೇಶಿ ಬ್ರ್ಯಾಂಡ್ನ ಸೋಫಾ ಸೆಟ್, ಕಾಟ್ ಮತ್ತಿತರ ಪೀಠೋಪಕರಣಗಳನ್ನು ಹಾಕಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಹಣ ನೀಡಿಲ್ಲ. ಹಾಗಾದರೆ, ಅದಕ್ಕೆ ಹಣ ಕೊಟ್ಟವರು ಯಾರು? ಇಂಥ ಐಷಾರಾಮಿ ಸೋಫಾ, ಕಾಟ್ಗಳನ್ನು ಬಳಸುವ ವ್ಯಕ್ತಿ ಸಮಾಜವಾದಿಯಾ ಎಂದು ಖಾರವಾಗಿ ಪ್ರಶ್ನಿಸಿದರು.
ನನಗೆ ಬಂದಿರುವ ಮಾಹಿತಿ ಪ್ರಕಾರ, ಯಾರೋ ಸಚಿವರೊಬ್ಬರ ಕಡೆಯವರು ಅದನ್ನೆಲ್ಲಾ ಮಾಡಿಸಿದ್ದಾರಂತೆ. ಇದೆನ್ನೆಲ್ಲಾ ನೋಡುತ್ತಿದ್ದರೆ ಇದು ಹ್ಯುಬ್ಲೆಟ್ ವಾಚ್ನ ಪರಿಷ್ಕೃತ ಆವೃತ್ತಿ ರೀತಿ ಕಾಣುತ್ತಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಬರಗಾಲ ನಿರ್ವಹಣೆ ಬದಲಿಗೆ ಕಾರುಗಳನ್ನು ಖರೀದಿ ಮಾಡಿಸಲು, ಸಚಿವರ ನಿವಾಸಗಳ ನವೀಕರಣಕ್ಕೆ ಹಣ ವೆಚ್ಚ ಮಾಡುತ್ತಿದ್ದಾರೆ. ಬಡ ರೈತರಿಗೆ ನೀಡಲು ಇವರ ಬಳಿ ಹಣ ಇಲ್ಲ. ಆದರೆ ಮಂತ್ರಿಗಳ ಮನೆ ಸಿಂಗಾರಕ್ಕೆ ಹತ್ತು ಕೋಟಿ ರು. ವೆಚ್ಚ ಮಾಡುತ್ತಿದ್ದಾರೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಇಂಥ ಖರ್ಚಿಗೆ ಒಂದು ರುಪಾಯಿ ಕೊಡುತ್ತಾ ಇರಲಿಲ್ಲ. ಒಂದು ಕಾರು ಖರೀದಿ ಮಾಡಲು ಬಿಡಲಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.