‘ಜಾತಿಗಣತಿ ವರದಿ ಜಾರಿ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಈಗಲೂ ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜಾತಿಗಣತಿ ವರದಿ ತಿರಸ್ಕರಿಸಬೇಕು ಎಂಬ ಒಕ್ಕಲಿಗರ ಸಂಘದ ಮನವಿ ಪತ್ರಕ್ಕೆ ಸಹಿ ಹಾಕಿರುವ ಕುರಿತು ಈ ರೀತಿ ಪ್ರತಿಕ್ರಿಯಿಸಿದರು. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು ಆಗ್ರಹ ಮಾಡಿವೆ.
ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಪಕ್ಷಬೇಧ ಮರೆತು ನಡೆಯುತ್ತಿದೆ. ಕೆಲ ಸಮುದಾಯ ಹಾಗೂ ಅದರ ನಾಯಕರಿಗೆ ಗೊಂದಲಗಳಿವೆ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು. ಜಾತಿ ಗಣತಿ ವರದಿ ತಿರಸ್ಕರಿಸುವಂತೆ ಮಾಡಿರುವ ಮನವಿ ಪತ್ರಕ್ಕೆ ನೀವೂ ಸಹಿ ಹಾಕಿದ್ದೀರಲ್ಲ? ಎಂಬ ಪ್ರಶ್ನೆಗೆ, ‘ನಾನು ಸಹಿ ಮಾಡಬಾರದೇ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜದ ಮೇಲಿನ ಗೌರವ ಹಾಗೂ ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲಾ ನಾಯಕರಲ್ಲೂ ಇರುತ್ತದೆ’ ಎಂದು ಸಮರ್ಥಿಸಿಕೊಂಡರು.