ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದರೊಂದಿಗೆ ಒಟ್ಟು 17 ರಾಜ್ಯಗಳಲ್ಲಿ ಸರ್ಕಾರ ನಡೆಸುವ ಮೂಲಕ ತನ್ನ ಬಲ ಹೆಚ್ಚಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಗೆ ಹೊಸ ಹುಮ್ಮಸ್ಸಿನೊಂದಿಗೆ ಸಜ್ಜಾಗಲು ಅಣಿಯಾಗಿದೆ.
ಮತ್ತೊಂದೆಡೆ ಹಲವು ಉಪಕ್ರಮಗಳ ಮೂಲಕ ಜನತೆಯ ಜೊತೆ ಬೆರೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯತ್ನಿಸಿದರೂ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ ಕೇವಲ 4ಕ್ಕೆ ಕುಸಿದಿದೆ. ಬಿಜೆಪಿ 12 ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ನಡೆಸುತ್ತಿದ್ದರೆ 5 ರಾಜ್ಯಗಳಲ್ಲಿ ಮೈತ್ರಿಯ ಬಲದಿಂದ ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ಹಿಮಾಚಲ,ಕರ್ನಾಟಕ ಮತ್ತು ಇತ್ತೀಚೆಗೆ ಗೆದ್ದ ತೆಲಂಗಾಣದಲ್ಲಿ ಮಾತ್ರ ಅಧಿಕಾರದಲ್ಲಿರುವ ಮೂಲಕ ಕೇವಲ 3ಕ್ಕೆ ಕುಸಿತ ಕಂಡಿದೆ. ಮತ್ತೊಂದೆಗೆ ಆಮ್ ಆದ್ಮಿ ಪಕ್ಷ(AAP) 2 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ.
ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಗೋವಾ, ಅಸ್ಸಾಂ, ತ್ರಿಪುರಾ, ಮಣಿಪುರ, ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ಬಿಜೆಪಿ ಅಧಿಕಾರದಲ್ಲಿರುವ 12 ರಾಜ್ಯಗಳು. ಮಹಾರಾಷ್ಟ್ರ, ಮೇಘಾಲಯ, ಪುದುಚೇರಿ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಈ ಐದು ರಾಜ್ಯಗಳಳ್ಲಿ ಬಿಜೆಪಿ ಮೈತ್ರಿಯೊಂದಿಗೆ ಅಧಿಕಾರದಲ್ಲಿದೆ.
ಕರ್ನಾಟಕ, ಹಿಮಾಚಲ ಪ್ರದೇಶ. ಜಾರ್ಖಂಡ್ ಮತ್ತು ತೆಲಂಗಾಣ ಈಗ ಕಾಂಗ್ರೆಸ್ ಅಧಿಕಾರದಲ್ಲಿರುವ 4 ರಾಜ್ಯಗಳು, ಹಾಗೆಯೇ ಪಂಜಾಬ್ ಮತ್ತು ದೆಹಲಿ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಾಗಿವೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಇತರ ಪಕ್ಷಗಳು ಅಧಿಕಾರದಲ್ಲಿವೆ. ಮಿಜೋರಂ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ.