ಬಾಲ್ಯ ವಿವಾಹದ ವಿರುದ್ಧ ಕಾನೂನುಗಳಿದ್ದರೂ, ನಾನಾ ರೀತಿಯ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಬಾಲ್ಯ ವಿವಾಹವೆಂಬ ಅನಿಷ್ಠ ಪದ್ದತಿಗೆ ಇನ್ನೂ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಹೀಗಾಗಿ, ಹದಿಹರೆಯದ ವಯಸ್ಸಿನಲ್ಲೇ ವಿವಾಹವಾಗುವ ಬಾಲಕಿಯರು, ತಮ್ಮ ಬಾಲ್ಯ ಮುಗಿಯುವ ಮುನ್ನವೇ ತಾಯಿಯರಾಗುತ್ತಿದ್ದಾರೆ. ತಾವು ಆಟವಾಡುವ ವಯಸ್ಸಿನಲ್ಲಿ ಮಕ್ಕಳನ್ನು ಸಲಹುವ, ಆಟವಾಡಿಸುವ ಜವಬ್ದಾರಿ ಹೊರುತ್ತಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಒಂದೂವರೆಗೆ ವರ್ಷದಲ್ಲಿ 336 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಅಂತೆಯೇ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ (2021-2023ವರೆಗೆ) 317 ಬಾಲಕಿಯರು ಗರ್ಭ ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್ಸಿಎಚ್) ಪೋರ್ಟಲ್ನ ಅಂಕಿ–ಅಂಶಗಳ ಪ್ರಕಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2021ರಲ್ಲಿ 18 ವರ್ಷದೊಳಿಗಿನ 124 ಬಾಲಕಿಯರು, 2022ರಲ್ಲಿ 158 ಹೆಣ್ಣು ಮಕ್ಕಳು, 2023ರ ನವೆಂಬರ್ವರೆಗೆ 35 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ ಎಂಬುದನ್ನು ಈ ಅಂಕಿಅಂಶಗಳು ಸಾಬೀತುಪಡಿಸಿವೆ.
ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಾಗೆಪಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 87 ಬಾಲಕಿಯರು ಗರ್ಭ ಧರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 75 ಬಾಲಕಿಯರು ಗರ್ಭಿಣಿಯರಾಗಿದ್ದಾರೆ.
ಬಾಲ್ಯ ವಿವಾಹವನ್ನು ತಡೆಯಲು ಪ್ರಯತ್ನಗಳು ನಡೆಯುತ್ತಲೇ ಇವೆ. ಜಾಗೃತಿ ಅಭಿಯಾನಗಳನ್ನೂ ಅಧಿಕಾರಿಗಳು ನಡೆಸುತ್ತಿದ್ದಾರೆ. ಆದರೂ, ಹಲವಾರು ಬಾಲ್ಯ ವಿವಾಹಗಳು ಬೆಳಕಿಗೆ ಬರುತ್ತಿಲ್ಲ. ಬಾಲಕಿಯರು ಗರ್ಭಿಣಿಯರಾದಾಗಲೇ ಬಾಲ್ಯ ವಿವಾಹಗಳು ಬೆಳಕಿಗೆ ಬರುತ್ತಿವೆ ಎಂದು ಹೇಳಲಾಗಿದೆ.