ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ರಾಜಧಾನಿ ಬೆಂಗಳೂರಿನ ಜನ ಮುಖ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ನಾನಾ ಮಾದರಿಯ 2.83 ಲಕ್ಷ ವಾಹನಗಳು ಕಳೆದ ಆರು ವರ್ಷದಲ್ಲಿ ನೋಂದಣಿಯಾಗಿವೆ. ಅದರಲ್ಲೂ ನಗರದಲ್ಲಿ ಮೂರು ಪಟ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿದೆ.
ಪೆಟ್ರೋಲ್ ಬೆಲೆ ಹೆಚ್ಚಳ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. 2017-2018ರ ಹಣಕಾಸಿನ ವರ್ಷದಲ್ಲಿ ದ್ವಿಚಕ್ರ, ತ್ರಿ ಚಕ್ರ, ನಾಲ್ಕು ಚಕ್ರದ ವಾಹನ ಸೇರಿ ಒಟ್ಟು 1,992 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದವು. 2018-19 ರಲ್ಲಿ 5,542, 2019-20ರಲ್ಲಿ 6,674, 2020-21ರಲ್ಲಿ 11,593 ಎಲೆಕ್ಟ್ರಿಕ್ ವಾಹನಗಳು ನೋಂದಣಿ ಆಗಿವೆ. 2021ರ ಬಳಿಕ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.
2017-18ರಲ್ಲಿ ಎಲೆಕ್ಟ್ರಿಕ್ ವಾಹನ ನೋಂದಣಿಯ ಸಂಖ್ಯೆ ಹಾಗೂ 2023-24ರಲ್ಲಿನ ವಾಹನಗಳ ನೋಂದಣಿಯನ್ನು ಗಮನಿಸಿದರೆ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಪ್ರಮಾಣ ಶೇ. 1000ರಷ್ಟು ಹೆಚ್ಚಾಗಿದೆ.2021-22ರಲ್ಲಿ 44,217, 2022-23ರಲ್ಲಿ 1,10,492 ವಾಹನಗಳು ನೋಂದಣಿಯಾದರೆ, 2023-24 ರಲ್ಲಿ ಬರೋಬ್ಬರಿ 1,03,009 ಎಲೆಕ್ಟ್ರಿಕಲ್ ವಾಹನಗಳು ನೋಂದಣಿ ಆಗಿವೆ.
2022-23ರಿಂದ ಈಚೆಗೆ ವಾರ್ಷಿಕ 1 ಲಕ್ಷಕ್ಕೂ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗುತ್ತಿವೆ. ಈ ಪೈಕಿ ದ್ವಿಚಕ್ರ ವಾಹನಗಳ ನೋಂದಣಿಯಲ್ಲಿ ಭಾರೀ ಏರಿಕೆಯಾಗಿದೆ.
“ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿರೋದು, ನಿಜಕ್ಕೂ ಉತ್ತಮ ಬೆಳವಣಿಗೆ” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.