ಬೆಂಗಳೂರು ನಗರದ ಪ್ರತಿಷ್ಠಿತ ಮಂತ್ರಿ ಸ್ಕ್ವೇರ್ ಮಾಲ್ಗೆ ಮತ್ತೆ ಬೀಗ ಹಾಕಲಾಗಿದೆ. 51 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಮಂತ್ರಿ ಸ್ಕ್ವೇರ್ ಮಾಲ್ನ ಪ್ರಮುಖ ದ್ವಾರಕ್ಕೆ ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್ ನೇತೃತ್ವದ ಅಧಿಕಾರಿಗಳ ತಂಡ ಆಗಮಿಸಿ, ಬೀಗ ಜಡಿದಿದೆ. 2019-20ರವರೆಗಿನ ತೆರಿಗೆ ಬಾಕಿಯಿದ್ದ ಹಿನ್ನೆಲೆ ಬೀಗ ಹಾಕಲಾಗಿದೆ.
2020ರ ಆಗಸ್ಟ್ನಲ್ಲೇ ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಕೂಡ ಮಾಲ್ನ ಆಡಳಿತ ಮಂಡಳಿ ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ.
ಈ ಹಿಂದೆ ಮಂತ್ರಿ ಮಾಲ್ ಸುಮಾರು 42,63,40,874 ರೂ. ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಆ ವೇಳೆ ಮಾಲ್ ಕಚೇರಿಯ ಕುರ್ಚಿ, ಟೇಬಲ್, ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಬಿಬಿಎಂಪಿ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು.
ತೆರಿಗೆ ಪಾವತಿಸದ ವಿಚಾರವಾಗಿ ಮಂತ್ರಿ ಸ್ಕ್ವೇರ್ ಮಾಲ್ಗೆ ಬಿಬಿಎಂಪಿ ಬೀಗ ಜಡಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮೂರ್ನಾಲ್ಕು ಬಾರಿ ಬೀಗ ಹಾಕಲಾಗಿತ್ತು. ಈ ಹಿಂದೆ 2021ರಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿದ್ದರು. ಬಳಿಕ ಮಂತ್ರಿ ಮಾಲ್ ಬೀಗ ಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿತ್ತು.
ಮಂತ್ರಿ ಮಾಲ್, ಬಿಬಿಎಂಪಿ ಎರಡೂ ನಿಯಮಗಳನ್ನು ಉಲ್ಲಂಘಿಸಿವೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಘಿಸಿದೆ ಎಂದು ಹೈಕೋರ್ಟ್ ಹೇಳಿತ್ತು. ತೆರಿಗೆ ಬಾಕಿಯ ಸ್ವಲ್ಪ ಭಾಗವನ್ನು ತಕ್ಷಣ ಪಾವತಿಸುವಂತೆ ಹೈಕೋರ್ಟ್ನ ಏಕಸದಸ್ಯ ಪೀಠ 2021ರ ಡಿಸೆಂಬರ್ನಲ್ಲಿ ಸೂಚನೆ ನೀಡಿತ್ತು. ಈಗ ಮತ್ತೆ 51 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಬೀಗ ಜಡಿಯಲಾಗಿದೆ.