ಮರಗಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹಗೆ ಬಂಧನಕ್ಕೊಳಗಾದ 24 ಗಂಟೆಯೊಳಗೆ ಜಾಮೀನು ಮಂಜೂರಾಗಿದೆ.
ನಿನ್ನೆ ಸಂಜೆ ವಿಕ್ರಂ ಸಿಂಹರನ್ನು ಬಂಧಿಸಿದ್ದ ಅರಣ್ಯಾಧಿಕಾರಿಗಳು, ಇಂದು ಜಡ್ಜ್ ಮುಂದೆ ಹಾಜರುಪಡಿಸಿದ್ದರು. ಬೇಲೂರು ನ್ಯಾಯಾಲಯದ ಸೀನಿಯರ್ ಸಿವಿಲ್ ಜಡ್ಜ್ ಜಾಮೀನು ಮಂಜೂರು ಮಾಡಿ, ಆದೇಶ ಹೊರಡಿಸಿದ್ದಾರೆ.
ವಿಕ್ರಂ ಪರ ವಕೀಲ ಚಂದ್ರೇಗೌಡ, ಧರ್ಮೇಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿ ಬಳಿ 126ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಪ್ರಕರಣದಲ್ಲಿ ನಿನ್ನೆ ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ರಾಕೇಶ್ ಶೆಟ್ಟಿ, ಜಯಮ್ಮ ವಿರುದ್ಧ ಬೇಲೂರು ತಹಶೀಲ್ದಾರ್ ಮಮತಾ ನೀಡಿದ್ದ ದೂರು ಆಧರಿಸಿ ಎಫ್ಐಆರ್ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪದ ಮೇರೆಗೆ ವಿಕ್ರಂ ಸಿಂಹರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದರು.
ವ್ಯವಸ್ಥಿತ ಪಿತೂರಿ: ವಿಕ್ರಂ ಸಿಂಹ ಆರೋಪ
ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಲಾಗುತ್ತಿದೆ. ಸಮಯ ಬರಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ವಿಕ್ರಂ ಸಿಂಹ ಕಿಡಿಕಾರಿದ್ದರು.
ಆರೋಗ್ಯ ತಪಾಸಣೆಗೆ ಕರೆತಂದ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದ ಅವರು, “ಹೇಳಲು ತುಂಬಾ ವಿಷಯಗಳಿವೆ. ವ್ಯವಸ್ಥಿತವಾಗಿ ನನ್ನನ್ನ ಮುಗಿಸುವುದಕ್ಕಾಗಿ ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಸಹೋದರ ಪ್ರತಾಪ್ ಸಿಂಹನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ” ಎಂದು ಹೇಳಿದ್ದರು.