ಉಡುಪಿ, ಜ 4: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ರಾಮಲಲ್ಲಾನ ಮೂರ್ತಿಯ ಆಯ್ಕೆ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ವಿಗ್ರಹ ಆಯ್ಕೆ ಬಗ್ಗೆ ಜನವರಿ 17ರಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಎರಡು ಕಪ್ಪು ಕಲ್ಲುಗಳು ಮತ್ತು ಒಂದು ಗ್ರಾನೈಟ್ ಕಲ್ಲಿನ ರಾಮ ಲಲ್ಲಾ ವಿಗ್ರಹವನ್ನು ಸುಂದರವಾಗಿ ಕೆತ್ತಲಾಗಿದೆ. ವಿಗ್ರಹ ಆಯ್ಕೆಗೆ ಟ್ರಸ್ಟ್ನ ಎಲ್ಲಾ ಸದಸ್ಯರು ಮತ ಚಲಾಯಿಸಿದ್ದಾರೆ. ಸರಯೂ ನದಿಯ ನೀರಿನಿಂದ ವಿಗ್ರಹಕ್ಕೆ ಅಭಿಷೇಕ ನಡೆಸುವ ದಿನದಂದು ವಿಗ್ರಹವನ್ನು ಅಂತಿಮಗೊಳಿಸಿದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ವಿಗ್ರಹ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ ಎಂಬ ವಿಚಾರ ಬಹಿರಂಗವಾದ ಮಧ್ಯೆಯೇ ಸ್ವಾಮೀಜಿ ಅಧಿಕೃತ ಘೋಷಣೆ ಇನ್ನೂ ಅಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.