ಬಿಜೆಪಿ ಆರ್ಎಸ್ಎಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಿವೆ ಎಂಬ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ವಿಜಯಪುರ ನಗರದ ಜ್ಞಾನ ಯೋಗಾಶ್ರಮಕ್ಕೆ ಗುರುವಾರ ಭೇಟಿ ನೀಡಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಮಾತನಾಡಿದ ಅವರು, ಯತೀಂದ್ರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
‘ಭಾರತವನ್ನು ಹಿಂದೂರಾಷ್ಟ್ರ ಮಾಡಿದರೆ ಪಾಕಿಸ್ತಾನ ಮಾಡಲು ಯಾರೋ ಸಿದ್ಧತೆ ನಡೆಸುತ್ತಿದ್ದಾರೋ ಏನೋ. ಅಂತಹ ಸಿದ್ಧತೆ ಇಲ್ಲಿ ನಡೆಯುತ್ತಿದೆ ಎಂಬುದರ ಮುನ್ಸೂಚನೆ ಕೊಡುತ್ತಿದ್ದಾರೆ ಅವರು. ಅವರ ಹೇಳಿಕೆ ಸರಿಯಲ್ಲ. ಭಾರತ ಹಿಂದಿನಿಂದಲೂ ಹಿಂದೂ ರಾಷ್ಟ್ರವಾಗಿ ಇದ್ದು, ಜಾತಿ ಧರ್ಮ ಪಂಗಡ ಎಂದು ಮೀಸಲಿರದೆ ಎಲ್ಲರನ್ನ ಅಪ್ಪಿ ಒಪ್ಪಿಕೊಂಡ ದೇಶ’ ಎಂದು ಶ್ರೀಗಳು ಹೇಳಿದರು.
ಮತ್ತೆ ಗೋಧ್ರಾದಂಥ ಘಟನೆ ನಡೆಯಬಹುದು ಎಂಬ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂತಹ ಘಟನೆ ನಡೆಯುವ ಬಗ್ಗೆ ಸುಳಿವು ಇದ್ದರೆ ಪೊಲೀಸ್ ಇಲಾಖೆಗೆ ಹೋಗಿ ಯಾಕೆ ಹೇಳುತ್ತಿಲ್ಲ? ಇವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.