ಬೆಂಗಳೂರು ಜ.7: ರಾಜ್ಯ ಸರ್ಕಾರವು ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಮೇಲೆ ಹಿಂದಿನ ಪ್ರಕರಣ ರೀ ಓಪನ್ ಮಾಡಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಟೀಕಾಪ್ರಹಾರ ನಡೆಸಿದ್ದಾರೆ.
ಶುಕ್ರವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಸೇಡಿನ ರಾಜಕೀಯ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಎನ್ಡಿಎ ಜತೆ ಕೈ ಜೋಡಿಸಲಾಗಿದ್ದು, ಇದರ ಬಗ್ಗೆ ಸಂಶಯ ಬೇಡ. ಕರಸೇವಕರ ಮೇಲಿನ ಪ್ರಕರಣ ಮರು ತನಿಖೆ ಮಾಡಿದ್ದು ಸೇಡಿನ ರಾಜಕೀಯ. ಮೈತ್ರಿ ಇರುವವರೆಗೆ ಸೇಡಿನ ರಾಜಕೀಯ ಮಾಡಿದರೆ ನಾವು ದನಿ ಎತ್ತಲಿದ್ದೇವೆ. ಇಂತಹ ಸಮಯದಲ್ಲಿ ನಾವು ಮಾತನಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.