ಹಾಸನ, ಜ.07: ಹಾಸನದಲ್ಲಿ ತಾಯಿ, ಇಬ್ಬರು ಮಕ್ಕಳ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ಮನೆಯಲ್ಲಿ ಇಲ್ಲದಿದ್ದಾಗ ಮನೆಗೆ ಬಂದಿದ್ದ ಸ್ನೇಹಿತ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಎಂಬ ಭಯಾನಕ ಸತ್ಯ ಬಯಲಾಗಿದೆ. ಪತಿ ಇಲ್ಲದ ವೇಳೆ ಮನೆಗೆ ಬಂದಿದ್ದ ವಿಜಯಪುರ ಮೂಲದ ನಿಂಗಪ್ಪ ಕಾಗವಾಡ ಎಂಬ ವ್ಯಕ್ತಿ ಹಣಕ್ಕಾಗಿ ಶಿವಮ್ಮನನ್ನು ಪೀಡಿಸಿ ಆಕೆ ಹಣ ನೀಡಲು ನಿರಾಕರಿಸಿದಾಗ ಶಿವಮ್ಮ, ಮಕ್ಕಳಾದ ಪವನ್(10), ಸಿಂಚನಾ(8) ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ಬಂಧಿಸಿದ್ದಾರೆ.
ಜ.01ರಂದು ಹಾಸನ ಹೊರವಲಯದ ದಾಸರಕೊಪ್ಪಲಿನ ಮನೆಯೊಂದರಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ನಿಗೂಡ ರೀತಿಯಲ್ಲಿ ಮೃತಪಟ್ಟಿದ್ದರು. ಬೇಕರಿ ಕೆಲಸಕ್ಕೆ ತುಮಕೂರಿಗೆ ಹೋಗಿದ್ದ ಪತಿ ಮನೆಗೆ ಬಂದು ನೋಡಿದಾಗ ಘಟನೆ ಬಯಲಾಗಿತ್ತು. ಪ್ರಕರಣದಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು ಇದು ಕೊಲೆಯೋ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಸದ್ಯ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ. ಗಂಡನಿಲ್ಲದ ವೇಳೆ ಮನೆಗೆ ಬಂದಿದ್ದ ಸ್ನೇಹಿತನೇ ಕೊಲೆ ಮಾಡಿದ್ದು ಆರೋಪಿಯನ್ನು ಬಂಧಿಸಲಾಗಿದೆ. ರೀಲ್ಸ್ ಸುಂದರಿ ಗೆಳತಿಯನ್ನೇ ಕೊಲೆಗೈದು ತಲೆ ಮರಿಸಿಕೊಂಡಿದ್ದ ಗೆಳೆಯ ಈಗ ಜೈಲು ಸೇರಿದ್ದಾನೆ.