ನವದೆಹಲಿ, ಜ 11: ನರೇಂದ್ರ ಮೋದಿ ನೇತೃತ್ವದ ಎನ್ಡಿಎ-2 ಸರ್ಕಾರದ ಕೊನೆಯ ಬಜೆಟ್ ಫೆಬ್ರುವರಿ 1ರಂದು ಮಂಡನೆಯಾಗಲಿದೆ. ಬಜೆಟ್ ಮಂಡನೆಗೆ ಒಂದು ದಿನ ಮುಂಚೆ, ಅಂದರೆ, ಜನವರಿ 31ರಂದ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಅಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುತ್ತಾರೆ. ಅದಾದ ಮರುದಿನ, ಫೆಬ್ರುವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ನಡೆಯಲಿದೆ.
ಬಜೆಟ್ ಅಧಿವೇಶನ ಫೆಬ್ರುವರಿ 9ರವರೆಗೆ ನಡೆಯಲಿದೆ. ಜನವರಿ 31ರಂದು ಆರಂಭವಾಗಿ 11 ದಿನಗಳ ಅವಧಿಯವರೆಗೆ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಈ ಬಜೆಟ್ನಲ್ಲಿ ದೊಡ್ಡ ಮಟ್ಟದ ಘೋಷಣೆಗಳು ಬರದೇ ಹೋದರೂ ಒಂದಷ್ಟು ಮಹತ್ವದ ನಿರ್ಧಾರಗಳನ್ನು ಘೋಷಿಸಬಹುದು ಎನ್ನಲಾಗಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಗಳು ಇರುವುದರಿಂದ ಅದಕ್ಕೆ ಮುಂಚಿನ ಬಜೆಟ್ ಮಧ್ಯಂತರ ಬಜೆಟ್ ಆಗಿರುತ್ತದೆ. ಚುನಾವಣೆ ಬಳಿಕ ಹೊಸ ಸರ್ಕಾರ ಬಂದು ಜುಲೈ ತಿಂಗಳಲ್ಲಿ ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗಬಹುದು. ಅಲ್ಲಿಯವರೆಗೆ ಸರ್ಕಾರದ ಅಗತ್ಯ ವೆಚ್ಚಗಳಿಗೆ ಸಮ್ಮತಿ ನೀಡಲು ಮತ್ತು ಆರ್ಥಿಕತೆಗೆ ಬೇಕಾದ ಹಣ ವಿನಿಯೋಗ ಸರಾಗವಾಗಿ ನಡೆಯಲು ಮಧ್ಯಂತರ ಬಜೆಟ್ ಮತ್ತು ವೋಟ್ ಆನ್ ಅಕೌಂಟ್ ಇರುತ್ತದೆ.
ಮಧ್ಯಂತರ ಬಜೆಟ್ನಲ್ಲಿ ದೊಡ್ಡ ಯೋಜನೆಗಳ ಘೋಷಣೆ ಮಾಡುವಂತಿಲ್ಲ. ಚುನಾವಣೆಯಲ್ಲಿ ಜನರನ್ನು ಉದ್ದೇಶಪೂರ್ವಕವಾಗಿ ಪ್ರಭಾವಿತಗೊಳಿಸುವುದನ್ನು ತಪ್ಪಿಸಲು ಈ ನಿರ್ಬಂಧ ಹಾಕಲಾಗಿದೆ. ಹಾಗೆಯೇ, ಆರ್ಥಿಕ ಸಮೀಕ್ಷೆಯನ್ನೂ ಇಂಟರೆಮ್ ಬಜೆಟ್ನಲ್ಲಿ ಪ್ರಸ್ತುಪಡಿಸುವಂತಿಲ್ಲ. ಆದಾಗ್ಯೂ ಸಮಗ್ರ ಆರ್ಥಿಕ ಸಮೀಕ್ಷೆ ಬದಲು 2024-25ರ ವರ್ಷಕ್ಕೆ ಭಾರತೀಯ ಆರ್ಥಿಕತೆಯ ಸ್ಥಿತಿಗತಿ ಕುರಿತ ಮಾಹಿತಿಪತ್ರವನ್ನು ಪ್ರಸ್ತುಪಡಿಸುವ ಸಾಧ್ಯತೆ ಇದೆ. ಇದ ಬಜೆಟ್ ಮಂಡನೆಗೆ ಮುನ್ನ ನಡೆಯಬಹುದು.