ಬೆಂಗಳೂರು, ಜ.16: ರಾಜ್ಯ ಸರ್ಕಾರವು ಐಎಎಸ್ ಮತ್ತು ಕೆಎಎಸ್ ತರಬೇತಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್ಗಳಿಗೆ ಕಾಲೇಜು ಶಿಕ್ಷಣ ಇಲಾಖೆಯಡಿ ನೋಂದಣಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ರಾಜ್ಯದಲ್ಲಿ ಇನ್ಮುಂದೆ ಕೋಚಿಂಗ್ ಸೆಂಟರ್ಗಳ ನೋಂದಣಿ ಕಡ್ಡಾಯ. ರಾಜ್ಯದಲ್ಲಿ ಎಗ್ಗಿಲ್ಲದೇ ಕೋಚಿಂಗ್ ಸೆಂಟರ್ಗಳು ತಲೆಯೆತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತೇವೆ ಎಂದು ಅಭ್ಯರ್ಥಿಗಳಿಂದ ಹಣ ಪಡೆಯುತ್ತಿವೆ. ಹೀಗಾಗಿ ಕೋಚಿಂಗ್ ಸೆಂಟರ್ಗಳು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆದು ಪ್ರಸ್ತುತ, ನೂರಾರು ಕೋಚಿಂಗ್ ಇನ್ಸ್ಟಿಟ್ಯೂಟ್ಗಳು, ಸೊಸೈಟಿಗಳು, ಟ್ರಸ್ಟ್ಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಐಎಎಸ್, ಐಪಿಎಸ್, ಐಎಫ್ ಎಸ್, ಕೆಎಎಸ್, ಭಾಷಾ ಕೋಚಿಂಗ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ಸಂಸ್ಥೆಗಳು ಕಾಲೇಜು ಶಿಕ್ಷಣ ಇಲಾಖೆಗೆ 25 ಸಾವಿರ ರೂ. ಶುಲ್ಕ ಕಟ್ಟಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ತಪ್ಪಿದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಇನ್ನು ಕೋಚಿಂಗ್ ಸೆಂಟರ್ಗಳು ನಾಯಿಕೊಡೆಗಳಂತೆ ಹರಡುತ್ತಿರುವುದನ್ನು ಪರಿಶೀಲಿಸಲು ಸರ್ಕಾರ ಬಯಸಿದೆ. ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು 2006ರಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗಿತ್ತು. ಆದರೆ ಅದು ಜಾರಿಯಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.