ಅಯೋಧ್ಯೆಯಲ್ಲಿ ನಾಳೆ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಟಾಪನೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸರ್ಕಾರ ಸೇರಿದಂತೆ ಇನ್ನಿತರ ರಾಜ್ಯಗಳು ಜನವರಿ 22ರಂದು ಸರ್ಕಾರಿ ರಜೆ ಘೋಷಣೆ ಮಾಡಿವೆ. ಕರ್ನಾಟಕದಲ್ಲಿ ರಜೆ ಘೋಷಣೆ ಮಾಡುವಂತೆ ಪ್ರತಿಪಕ್ಷಗಳು ಸರ್ಕಾರಕ್ಕೆ ಮನವಿ ಮಾಡಿದ್ದು, ಇದೀಗ ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಭಕ್ತಿ, ಗೌರವ ಧರ್ಮ ಪ್ರಚಾರಕ್ಕೆ ಮಾಡುವುದಿಲ್ಲ ಎಂದು ಹೇಳಿದರು. ಈ ಮೂಲಕ ಸರ್ಕಾರಿ ರಜೆ ಘೋಷಣೆಗೆ ಆಗ್ರಹಿಸಿದ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಡಿಕೆ ಶಿ, ನಾವು ಭಕ್ತಿ, ಗೌರವ, ಧರ್ಮ ಪ್ರಚಾರಕ್ಕೆ ಮಾಡುವುದಿಲ್ಲ. ದೇಗುಲಗಳಲ್ಲಿ ಏನು ಆಚರಣೆ ಮಾಡಬೇಕು ಮಾಡುತ್ತಾರೆ. ಏನು ಪೂಜೆ, ಪುನಸ್ಕಾರ ಮಾಡಬೇಕು ಅದನ್ನು ಮಾಡುತ್ತೇವೆ. ನಮಗೆ ಯಾರೂ ಹೇಳುವ ಅವಶ್ಯಕತೆ ಇಲ್ಲ. ಪ್ರಾರ್ಥನೆಗಳಿಂದ ಫಲ ದೊರೆಯುತ್ತೆಂಬ ನಂಬಿಕೆ ನಮಗೆ. ಹಾಗಾಗಿ ಪ್ರಾರ್ಥನೆ ಮಾಡ್ಕೊಳ್ಳಿ ಎಂದು ಹೇಳುತ್ತಿದ್ದೇವೆ. ಸಿದ್ದರಾಮಯ್ಯ ಹೆಸರಲ್ಲಿ ರಾಮ, ನನ್ನ ಹೆಸರಲ್ಲಿ ಶಿವ ಇದ್ದಾನೆ. ನಮಗೆ ಯಾರೂ ಹೇಳಿಕೊಡಬೇಕಿಲ್ಲ, ಒತ್ತಡವೂ ಹಾಕಬೇಕಿಲ್ಲ. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಅಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಈ ಮೂಲಕ ಪರೋಕ್ಷವಾಗಿ ಸರ್ಕಾರಿ ರಜೆ ನೀಡಲು ನಿರಾಕರಿಸಿದ್ದಾರೆ.