ಚಿಕ್ಕಬಳ್ಳಾಪುರ : ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಮೃತ ಹಸ್ತದಿಂದ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಾಗೂ ಪೂಜಾ ವಿಧಿವಿಧಾನ ಪೂರೈಸಿದ ಪ್ರಧಾನಿ ಮೋದಿ, ರಾಮ ಮಂದಿರ ಆವರಣದಲ್ಲಿ ಆಯೋಜಿಸದ ಕಾರ್ಯಕ್ರಮದಲ್ಲಿ ತಮ್ಮ 11 ದಿನಗಳ ಕಠಿಣ ಉಪವಾಸ ವೃತ ಅಂತ್ಯಗೊಳಿಸಿದ್ದಾರೆ. ಸ್ವಾಮೀಜಿಗಳು ಪ್ರಧಾನಿ ಮೋದಿಗೆ ಶ್ರೀರಾಮನ ಪ್ರಸಾದ ನೀಡಿ ಕಠಿಣ ವೃತ ಪೂರ್ಣಗೊಳಿಸಿದ್ದಾರೆ. ಆದ್ರೆ, ನರೇಂದ್ರ ಮೋದಿ ಉಪವಾಸ ಮಾಡಿದ್ದೇ ಅನುಮಾನ ಎಂದು ಮಾಜಿ ಮುಖ್ಯಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮೋದಿ ಉಪವಾಸ ಮಾಡಿಲ್ಲ. ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ. 11 ದಿನಗಳ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸ ವ್ರತದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.