ಚಾಮರಾಜನಗರ : ಜಿಲ್ಲೆಯ ಗಡಿಭಾಗದಲ್ಲಿರುವ ತಮಿಳುನಾಡಿನ ಗೇರು ಮಾಳದ ರಸ್ತೆಗೆ ಆಗಮಿಸಿದ ಒಂಟಿ ಸಲಗವೊಂದು ಆಹಾರಕ್ಕಾಗಿ ಆ ರಸ್ತೆಯಲ್ಲಿ ಬರುವ ಎಲ್ಲ ವಾಹನಗಳನ್ನು ತಡೆದು ಬ್ರೇಕ್ ಇನ್ಸ್ಪೆಕ್ಟರ್ ನಂತೆ ಆಹಾರಕ್ಕಾಗಿ ತಪಾಸಣೆ ಮಾಡಿದ ಘಟನೆ ನಡೆದಿದೆ. ಗೇರು ಮಾಳದ ರಸ್ತೆಯಲ್ಲಿ ಪಿಕ್ಅಪ್ ವಾಹನ, ಲಾರಿ, ಬಸ್ ಅನ್ನೂ ಬಿಡದ ಒಂಟಿ ಸಲಗ ಸೊಂಡಿಲನ್ನು ಚಾಚಿ ಕಬ್ಬು, ತರಕಾರಿ ಸೇರಿದಂತೆ ಇತರ ಆಹಾರ ಪದಾರ್ಥಕ್ಕಾಗಿ ಹುಡುಕಾಡಿದೆ. ಆನೆಯು ನಡೆಸಿದ ಹುಡುಕಾಟದಿಂದ ವಾಹನ ಚಾಲಕರು ಗಲಿಬಿಲಿಗೊಳಗಾದರು. ಆನೆಯು ವಾಹನಗಳ ತಪಾಸಣೆ ನಡೆಸುತ್ತಿದ್ದ ದೃಶ್ಯವನ್ನು ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಟ್ಟಿದ್ದಾರೆ.