ಕಾರವಾರ : ಬಿಜೆಪಿ ನಾಯಕ, ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದೀಗ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸದಲ್ಲಿ ಚುನಾವಣೆ ಆರಂಭಕ್ಕೂ ಮುನ್ನ ರಾಮನ ಹೆಸರಿನಲ್ಲಿ ಪ್ರಚಾರ ಆರಂಭಿಸಿರುವ ಕಾಗೇರಿ, ಬಿಜೆಪಿಗೆ ನೀವು ಮತ ಹಾಕಿದರೆ ಅದು ರಾಮನಿಗೆ ಹಾಗೂ ಪ್ರಧಾನಿ ಮೋದಿಗೆ ಮತ ಹಾಕಿದಂತೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಕಾರ್ಯರ್ತರಿಗೆ ಕರೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕಚೇರಿಯಲ್ಲಿ ಮಾತನಾಡಿದ ಅವರು, ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಮಲದ ಹೂ. ವ್ಯಕ್ತಿ ಯಾರು ಎಂಬುದನ್ನು ವರಿಷ್ಠರು ಸೂಕ್ತ ಸಮಯದಲ್ಲಿ ಘೋಷಣೆ ಮಾಡುತ್ತಾರೆ. ಕಳೆದ ಬಾರಿಗಿಂತಲೂ ದಾಖಲೆ ಮತಗಳಿಂದ ಈ ಬಾರಿ ನಮ್ಮ ಬಿಜೆಪಿ ಗೆಲ್ಲಲಿದೆ. ಕಳೆದ ಬಾರಿ 4 ಲಕ್ಷ 80 ಸಾವಿರ ಮತಗಳ ಅಂತರದಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಆ ದಾಖಲೆಯನ್ನು ಮುರಿದು ಇನ್ನೊಂದು ದಾಖಲೆಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅವರು ಹೇಳಿದ್ದಾರೆ.