ಬೆಂಗಳೂರು : ರಾಜ್ಯಕ್ಕೆ ಬರಬೇಕಾದ 7.6 ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಬೇಕೆಂಬ ತಮಿಳುನಾಡು ಬೇಡಿಕೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಕಾವೇರಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಾರ ನದಿಯ ಸ್ವಾಭಾವಿಕ ನೀರಿನ ಹರಿವು ಖಚಿತಪಡಿಸಿಕೊಳ್ಳಲು ಸಮಿತಿಯು ಕರ್ನಾಟಕಕ್ಕೆ ನಿರ್ದೇಶಿಸಿದೆ.7.61 ಟಿಎಂಸಿ ಬಾಕಿ ಜೊತೆಗೆ ಫೆಬ್ರವರಿಯಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕೆಂದು ತಮಿಳುನಾಡು ಸಭೆಯಲ್ಲಿ ವಾದಿಸಿತ್ತು. ಪ್ರತಿವಾದಿಸಿದ ಕರ್ನಾಟಕ, ರಾಜ್ಯದಲ್ಲಿ ಈಗ ಬರ ಪರಿಸ್ಥಿತಿ ಎದುರಾಗಿದೆ. ತಮಿಳುನಾಡು 7.61 ಟಿಎಂಸಿ ನೀರು ಕೇಳುತ್ತಿರುವುದಕ್ಕೆ ಅರ್ಥವೇ ಇಲ್ಲ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲ. ಕುಡಿಯುವ ಬಳಕೆಗೂ ನೀರು ಸಂಗ್ರಹವಿಲ್ಲ. ಕರ್ನಾಟಕದಲ್ಲಿ ಮುಂದೆ ಮಳೆಯಾಗುವ ಸಾಧ್ಯತೆ ಸಹ ಕಡಿಮೆ. ತಮಿಳುನಾಡು ರಾಜ್ಯದಲ್ಲಿ ಈಗ ಹೆಚ್ಚು ಮಳೆಯಾಗುತ್ತಿದೆ. ಹಿಂಗಾರು ಮಾರುತಗಳು ಪ್ರಬಲವಾಗಿವೆ, ಮಳೆ ಹೆಚ್ಚು ಸುರಿಯುತ್ತಿದೆ. ತಮಿಳುನಾಡಿಗೆ ನೀರು ಬಿಟ್ಟರೆ ವಾಪಸ್ ತೆಗೆದುಕೊಳ್ಳಲು ಸಾಧ್ಯವೆ? ಹೀಗಾಗಿ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಕರ್ನಾಟಕದ ಅಧಿಕಾರಿಗಳು ವಾದ ಮಂಡಿಸಿದ್ದಾರೆ.