ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಸಾಮಾಜಿಕ ನ್ಯಾಯ, ಆರ್ಥಿಕ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ ಮತ್ತು ಪ್ರಾದೇಶಿಕ ತಾರತಮ್ಯ ನಿವಾರಣೆಯ ಹೆಗ್ಗುರಿಗಳನ್ನುಳ್ಳ ಪರಿಪೂರ್ಣ ದೃಷ್ಟಿಯ ಜನಪ್ರಿಯ ಬಜೆಟ್ ಆಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಅದರಲ್ಲೂ ನಮ್ಮ ತವರು ಜಿಲ್ಲೆಯಾದ ವಿಜಯಪುರದ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು, ಇಟ್ಟಂಗಿಹಾಳದ ಬಳಿ ಆಹಾರ ಪಾರ್ಕ್ ಮತ್ತು ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಘೋಷಿಸಿರುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ಸಮರ್ಪಿಸುತ್ತೇನೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದು ಸಿದ್ದರಾಮಯ್ಯನವರ ದಾಖಲೆಯ ಬಜೆಟ್ ಆಗಿದೆ. ಭಾರತದ ಶಾಸಕಾಂಗ ಇತಿಹಾಸದಲ್ಲಿ 15 ಬಾರಿ ಬಜೆಟ್ ಮಂಡಿಸಿರುವವರು ತೀರಾ ಕಡಿಮೆ ಇದ್ದಾರೆ. ಮುಖ್ಯಮಂತ್ರಿಗಳು ತಮ್ಮ ಬಜೆಟ್ಟಿನಲ್ಲಿ ಶಕ್ತಿಶಾಲಿ ಕರ್ನಾಟಕ ನಿರ್ಮಾಣದ ತಮ್ಮ ದೂರದೃಷ್ಟಿಯನ್ನು ರಾಜ್ಯದ ಜನತೆಯ ಮುಂದಿಟ್ಟಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.