ಬೆಂಗಳೂರು : ಬಿಜೆಪಿ ಯಾವತ್ತೂ ಮುಂಬಾಗಿಲಿಂದ ಅಧಿಕಾರಕ್ಕೆ ಬಂದಿಲ್ಲ, ಆಪರೇಶನ್ ಕಮಲ ಆರಂಭಿಸಿದ್ದು ಯಡಿಯೂರಪ್ಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಜನತೆ ಯಾವತ್ತೂ ಬಿಜೆಪಿಯನ್ನು ಆಶೀರ್ವಾದಿಸಿ ಅಧಿಕಾರಕ್ಕೆ ತಂದಿಲ್ಲ, 2008 ರಲ್ಲಿ ಅವರಿಗೆ ದಕ್ಕಿದ್ದು 110 ಸ್ಥಾನ ಮಾತ್ರ. ಆಗಲೇ ಯಡಿಯೂರಪ್ಪ ಆಪರೇಶನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು. 2018ರಲ್ಲಿ ಬಿಜೆಪಿ ಸಿಕ್ಕಿದ್ದು 100 ಸೀಟು ಮಾತ್ರ. ಆದರೆ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ 17 ಶಾಸಕರನ್ನು ಖರೀದಿಸಿ ಇವರು ಅಧಿಕಾರಕ್ಕೆ ಬಂದರು. 2023-24 ಸಾಲಿಗೆ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಗಿಂತ ಅದೇ ವರ್ಷ ನಾವು ಅಧಿಕಾರಕ್ಕೆ ಬಂದು ರೂ. 62,200 ಕೋಟಿಗಳಷ್ಟು ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಿದ್ದೆ. ವಿಷಯ ಹೀಗಿರುವಾಗ ಅಭಿವೃದ್ಧಿ ಕಾರ್ಯಗಳಿಗಾಗಿ ಹಣ ಮೀಸಲಿಟ್ಟಿಲ್ಲ ಅಂತ ಬಿಜೆಪಿ ನಾಯಕರು ಅದ್ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.