ಮೈಸೂರು : ನಗರದ ಜಲಪುರಿಯಲ್ಲಿ ನಿರ್ಮಾಣವಾಗಿರುವ ಪೊಲೀಸ್ ಆರೋಗ್ಯ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಧ್ಘಾಟಿಸಿದರು. ಪೊಲೀಸ್ ಆರೋಗ್ಯ ಕೇಂದ್ರ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, 6 ಹಾಸಿಗೆಗಳಿಂದ ಕೂಡಿದೆ. ಈ ಕೇಂದ್ರ ಈ ಹಿಂದೆ ಹಳೇ ಪೊಲೀಸ್ ವಸತಿಗೃಹದಲ್ಲಿ ಕಾರ್ಯನಿರ್ವಹಿಸುತಿತ್ತು. ಅದೇ ಜಾಗದಲ್ಲಿ ನಿರ್ಮಿತಿ ಕೇಂದ್ರದಿಂದ ಹೊಸದಾಗಿ ನಿರ್ಮಿಸಲಾಗಿದೆ. ನಗರದಲ್ಲಿರುವ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ಸೇವೆ ಒದಗಿಸಲು ಸ್ಥಾಪಿಸಲಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಸೇವೆ ಲಭ್ಯವಿರಲಿದೆ. ತಲಾ ಇಬ್ಬರು ವೈದ್ಯಾಧಿಕಾರಿಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಗ್ರೂಪ್ ಡಿ ಹಾಗೂ ಫಾರ್ಮಸಿಸ್ಟ್ ಹುದ್ದೆಗಳು ಮಂಜೂರಾಗಿವೆ. ಸದ್ಯ ತಲಾ ಒಬ್ಬೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಔಷಧಿ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹಾದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಮಂಜೇಗೌಡ, ಪ್ರಾದೇಶಿಕ ಆಯುಕ್ತರಾದ ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಭಾಗಿಯಾಗಿದ್ದರು.