ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಎಲ್ಲಾ ಫ್ರಾಂಚೈಸಿ ಸಿದ್ಧತೆಗಳನ್ನು ಶುರು ಮಾಡಿಕೊಂಡಿದೆ. ಅತ್ತ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ತನ್ನ ಸಿಬ್ಬಂದಿ ವರ್ಗದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಅದರಂತೆ ಮುಂಬರುವ ಐಪಿಎಲ್ನಿಂದ SRH ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಅವರನ್ನು ಕೈ ಬಿಡಲಾಗಿದೆ.
ಡೇಲ್ ಸ್ಟೇನ್ ಸ್ಥಾನದಲ್ಲಿ ನ್ಯೂಝಿಲೆಂಡ್ ತಂಡದ ಮಾಜಿ ಆಲ್ರೌಂಡರ್ ಜೇಮ್ಸ್ ಫ್ರಾಂಕ್ಲಿನ್ ಅವರನ್ನು ನೂತನ ಬೌಲಿಂಗ್ ಕೋಚ್ ಆಗಿ SRH ಫ್ರಾಂಚೈಸಿ ನೇಮಿಸಿದೆ. ನ್ಯೂಝಿಲೆಂಡ್ ಪರ 38 ಟಿ20 ಪಂದ್ಯಗಳನ್ನಾಡಿರುವ ಫ್ರಾಂಕ್ಲಿನ್ 20 ವಿಕೆಟ್ ಹಾಗೂ 463 ರನ್ ಕಲೆಹಾಕಿದ್ದರು.
ಹಾಗೆಯೇ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ 20 ಪಂದ್ಯಗಳನ್ನಾಡಿದ್ದರು. ಈ ವೇಳೆ 16 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಫ್ರಾಂಕ್ಲಿನ್ 327 ರನ್ ಹಾಗೂ 9 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. 2011 ರ ಬಳಿಕ ಐಪಿಎಲ್ನಿಂದ ದೂರ ಉಳಿದಿದ್ದ ಜೇಮ್ಸ್ ಫ್ರಾಂಕ್ಲಿನ್ ಇದೀಗ ಬೌಲಿಂಗ್ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.