ಭಾರತೀಯ ಜನತಾ ಪಕ್ಷ ಲೋಕಸಭೆ ಚುನಾವಣೆ 2024 ರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಇದರಲ್ಲಿ 28 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಿಂದುಳಿದ ವರ್ಗದ 57 ಅಭ್ಯರ್ಥಿಗಳಿಗೆ, ಎಸ್ಸಿ ಸಮುದಾಯದ 27 ಅಭ್ಯರ್ಥಿಗಳು, 18 ಎಸ್ಟಿ ಹಾಗೂ 50 ವರ್ಷದ ಕೆಳಗಿರುವ 47 ಯುವಕರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಮೊದಲ ಪಟ್ಟಿಯಲ್ಲಿ ಮೋದಿ ಕ್ಯಾಬಿನೆಟ್ನಲ್ಲಿದ್ದ 34 ಕೇಂದ್ರ ಸಚಿವರಿಗೆ ಮತ್ತೆ ಟಿಕೆಟ್ ಖಚಿತವಾಗಿದೆ. ಇಬ್ಬರು ಮಾಜಿ ಸಿಎಂಗಳಿಗೂ ಟಿಕೆಟ್ ನೀಡಲಾಗಿದೆ.
ಇದರ ಮಧ್ಯೆ ಬಿಜೆಪಿ ಟಿಕೆಟ್ ನೀಡಿದ್ದರೂ ಸಹ ಖ್ಯಾತ ಗಾಯಕನೊಬ್ಬ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಖ್ಯಾತ ಭೋಜ್ಪುರಿ ಗಾಯಕ ಮತ್ತು ಬಿಜೆಪಿ ಅಭ್ಯರ್ಥಿ ಪವನ್ ಸಿಂಗ್ ಅವರು ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದು, ಪವನ್ ಸಿಂಗ್ ಅವರು ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ತಮ್ಮ ಟ್ವೀಟ್ನಲ್ಲಿ ಪವನ್ ಸಿಂಗ್ ಅವರು, ‘ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ಪಕ್ಷವು ನನ್ನನ್ನು ನಂಬಿ ಅಸನ್ಸೋಲ್ ಅಭ್ಯರ್ಥಿ ಎಂದು ಘೋಷಿಸಿತು. ಆದರೆ ಕಾರಣಾಂತರಗಳಿಂದ ನಾನು ಅಸನ್ಸೋಲ್ನಿಂದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ.’ ಎಂದು ಟ್ವೀಟ್ ಮಾಡಿದ್ದಾರೆ. ಶನಿವಾರ ಬಿಜೆಪಿ ಪ್ರಕಟಿಸಿದ 195 ಅಭ್ಯರ್ಥಿಗಳ ಪಟ್ಟಿಯಲ್ಲಿ ಪವನ್ ಸಿಂಗ್ ಹೆಸರೂ ಸೇರಿತ್ತು. ಆದರೆ ತಾನು ಚುನಾವಣೆಯಿಂದ ಹಿಂದೆ ಸರಿಯಲು ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.