ಹಾಸನ : ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ಯಾರೇ ಅಭ್ಯರ್ಥಿ ಆದರೂ ಅವರ ವಿರುದ್ಧ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹೇಳಿದ್ದಾರೆ. ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಆರು ವರ್ಷ ಅನರ್ಹಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ ಅವರು ಮೇಲ್ಮನವಿ ಸಲ್ಲಿಸಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಹಾಸನದಿಂದ ನಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೂಡ ಇದಕ್ಕೆ ದ್ವನಿಗೂಡಿಸಿದ್ದಾರೆ. ಇದು ನಮ್ಮ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರ ದಾರಿ ತಪ್ಪಿಸುವ ಕೆಲಸವಾಗಿದೆ, ಇದರ ವಿರುದ್ಧ ನಾನು ಕೇಂದ್ರದ ನಾಯಕರಿಗೆ ದೂರು ನೀಡಿದ್ದೆ. ಕೇಂದ್ರದ ನಾಯಕರು ನನ್ನ ಕರೆಸಿ ಮಾತನಾಡಿದ್ದಾರೆ. ಹಾಸನದಿಂದ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ, ನೀವು ಕೆಲಸ ಮಾಡಿ ಎಂದು ಹೇಳಿದ್ದಾರೆ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ. ನಮ್ಮ ಕೆಲ ನಾಯಕರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.