ಬೆಂಗಳೂರು : ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇವೆ. ಈ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಸ್ವತಃ ಮಂಜುನಾಥ್ ಅವರೇ ಸ್ಪಷ್ಟಪಡಿಸಿದ್ದರೂ ಕೂಡ ಬೆಂಗಳೂರು ಗ್ರಾಮಾಂತರ ಅಥವಾ ಬೆಂಗಳೂರು ಉತ್ತರದಲ್ಲಿ ಡಾ. ಸಿ.ಎನ್.ಮಂಜುನಾಥ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಸುದ್ದಿ ವೈರಲ್ ಆಗುತ್ತಲೆ ಇವೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಅಳಿಯನ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರೇ ಪ್ರತಿಕ್ರಿಯಿಸಿದ್ದು, ಅವರು ರಾಜಕೀಯಕ್ಕೆ ಬರುವುದು ಬೇಡ ಎನ್ನುವ ಮಾತುಗಳನ್ನಾಡಿದ್ದಾರೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ದೇವೇಗೌಡ, ಇಡೀ ದೇಶಾದ್ಯಂತ ಮಂಜುನಾಥ್ ತಮ್ಮದೇ ಆದ ಹೆಸರು ಮಾಡಿದ್ದಾರೆ. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಅಂತವರು ಬರುವುದು ಸರಿಯಲ್ಲ. ಈ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿ ಎಂದು ಒತ್ತಾಯಿಸಲ್ಲ. ವ್ಯಕ್ತಿತ್ವಕ್ಕೆ ಕಳಂಕ ತರುವ ತೀರ್ಮಾನ ನಾವು ಮಾಡಲ್ಲ. ಅವರು ರಾಜಕೀಯಕ್ಕೆ ಬರುವುದಕ್ಕೆ ಸಮ್ಮತಿ ಸೂಚಿಸಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ದೇವೇಗೌಡ್ರು ಅಳಿಯ ರಾಜಕೀಯ ಕ್ಷೇತ್ರಕ್ಕೆ ಬರುವುದು ಬೇಡ ಎನ್ನುವ ಅರ್ಥದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.