ಮಂಡ್ಯ : ಲೋಕಸಭೆ ಚುನಾವಣೆಗೆ ಕೆಲವೆ ತಿಂಗಳು ಬಾಕಿ ಇರುವಾಗಲೆ ಮಂಡ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವೆಂಕಟರಮಣ ಗೌಡ ಅಲಿಯಾಸ್ ಸ್ಟಾರ್ ಚಂದ್ರು ಅವರಿಗೆ ಮನ್ನಣೆ ನೀಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಡಾ.ಹೆಚ್.ಎನ್.ರವೀಂದ್ರ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ “ಡಿಕೆ ಶಿವಕುಮಾರ್ ನನ್ನ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ಕೊಟ್ಟಿದ್ದರು. ಇದೀಗ ವಾತವರಣ ಕಲುಷಿತವಾಗಿದೆ. ಹೀಗಾಗಿ ಕೆಪಿಸಿಸಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ” ಎಂದರು. ಅಲ್ಲದೆ ಕೆಪಿಸಿಸಿಯ ಪ್ರತಿಯೊಂದು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸ ಇತ್ತು. ಕಡೆ ಗಳಿಗೆಯಲ್ಲಿ ಮೇಲುಕೋಟೆ ಕ್ಷೇತ್ರವನ್ನು ರೈತ ಸಂಘಕ್ಕೆ ನೀಡಿದ್ದಾರೆ. ರೈತ ಸಂಘಕ್ಕೆ ಬಿಟ್ಟುಕೊಡುವ ಬಗ್ಗೆ ಸೌಜನ್ಯಕ್ಕೂ ಚರ್ಚೆ ಮಾಡದೆ ತೀರ್ಮಾನ ತೆಗೆದುಕೊಂಡರು. ಕಾರ್ಯಕರ್ತರು, ಸ್ಥಳೀಯರು ನಿಮಗೆ ಗುಲಾಮರು, ನೀವು ಹೇಳಿದ ಹಾಗೆ ಕುಣಿಯುವ ಗೊಂಬೆಗಳು ನಾವು ಎಂದು ಬೇಸರ ವ್ಯಕ್ತಪಡಿಸಿದರು.