ಬೆಂಗಳೂರು, ಮಾರ್ಚ್ 7: ಕರ್ನಾಟಕ ಸರ್ಕಾರ ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿಯನ್ನು ಜಾರಿಗೆ ತರಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ. ‘ಸೈಬರ್ ಕ್ರೈಮ್ ಶೃಂಗಸಭೆ-2024 ’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 43 ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಈ ಠಾಣೆಗಳು ಜನರಿಗೆ ಸುರಕ್ಷತೆಯನ್ನು ಒದಗಿಸಲು ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.
ಸೈಬರ್ ಕ್ರೈಂ ವಿಭಾಗವನ್ನು ಬಲಪಡಿಸಲು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಕಂಪನಿಗಳ ಸಹಾಯವನ್ನು ರಾಜ್ಯ ಸರ್ಕಾರ ಪಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸೈಬರ್ ಕ್ರೈಂ ಕಡಿಮೆ ಮಾಡುವ ಮತ್ತು ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಸಿಐಡಿ ಕಚೇರಿಯಲ್ಲಿ ಸ್ಥಾಪಿಸಲಾದ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನೆಯಲ್ಲಿ (ಸಿಸಿಐಟಿಆರ್) ತರಬೇತಿ ಕಾರ್ಯಕ್ರಮಗಳಿಂದ ಪೊಲೀಸ್, ನ್ಯಾಯಾಂಗ ಮತ್ತು ಭಾರತೀಯ ರಕ್ಷಣಾ ಪಡೆಗಳ 33,000 ಕ್ಕೂ ಹೆಚ್ಚು ಸಿಬ್ಬಂದಿ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.