ಮಂಡ್ಯ : ಲೋಕಸಭಾ ಚುನಾವಣೆ ಸಮೀಪದಲ್ಲಿದ್ದು, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಒಕ್ಕೂಟ ಸೀಟು ಹಂಚಿಕೆಯ ಮಾತುಕತೆ ನಡೆಸುತ್ತಿದೆ. ಮಂಡ್ಯದಿಂದ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ನಾಯಕರ ಒತ್ತಾಯಗಳು ಹೆಚ್ಚುತ್ತಿದ್ದು, ನಿನ್ನೆ ನಡೆದ ಸಭೆಯಲ್ಲೂ ಮಂಡ್ಯದಿಂದ ಕಣಕ್ಕಿಳಿಯುವಂತೆ ಒತ್ತಾಯಿಸಿದ್ದಾರೆ. ನೀವೇ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ನಾಯಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಅಷ್ಟಾಗಿ ಒಲವು ತೋರದ ಕುಮಾರಸ್ವಾಮಿ, ಅಭ್ಯರ್ಥಿ ಆಯ್ಕೆ ಸಂಬಂಧ ಎಲ್ಲಾ ತೊಡಕುಗಳನ್ನ ನಿವಾರಿಸುವ ಹಾಗೂ ಪಕ್ಷದ ನಾಯಕರ ನಡುವಿನ ಸಣ್ಣಪುಟ್ಟ ಭಿನ್ನಮತ ನಿವಾರಿಸುವ ಬಗ್ಗೆ ಚರ್ಚೆ ನಡೆಸಿದರು. ಎಲ್ಲಾ ನಾಯಕರ ಅಭಿಪ್ರಾಯ ಪಡೆದ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.