ಮೈಸೂರು: ರಾಜವಂಶಸ್ಥರು ಮತ್ತು ಸರ್ಕಾರದ ನಡುವೆ ವ್ಯಾಜ್ಯ ಇದೆ. ಯದುವೀರ್ ಜನಪ್ರತಿನಿಧಿಯಾದ್ರೆ ಎಲ್ಲ ಬಗೆಹರಿಯುತ್ತೆ ಎಂದು ಹೇಳುವ ಮೂಲಕ ರಾಜವಂಶಸ್ಥ ಯದುವೀರ್ ಗೆ ಬಿಜೆಪಿ ಟಿಕೆಟ್ ಎಂದು ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಘೋಷಣೆ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯದುವೀರ್ ಹವಾನಿಯಂತ್ರಿತ ವ್ಯವಸ್ಥೆಯೊಳಗೆ ಇದ್ದವರು. ದೊಡ್ಡಗಡಿಯಾರದ ಬಳಿ ಬಿಜೆಪಿ ಕಾರ್ಯಕರ್ತರ ಜತೆ ಕುಳಿತು ಧಿಕ್ಕಾರ ಕೂಗುತ್ತಾರೆ. ರಾಜರಾಗಿದ್ದೂ ಪ್ರಜೆಯಾಗಲು ರೆಡಿ ಆಗಿದ್ದಾರೆ. ಚಾಮುಂಡಿಬೆಟ್ಟಕ್ಕೆ ಹೊಸ ಪೈಪ್ ಲೈನ್ ಆಗಲು ಪ್ರಮೋದಾದೇವಿ ಒಡೆಯರ್ ಬಿಟ್ಟಿರಲಿಲ್ಲ. ಮುಂದೆ ಹೊಸ ಪೈಪ್ ಲೈನ್ ಆಗುತ್ತೆ. ಮೈಸೂರಿನ ಲಲಿತ ಮಹಲ್ ಅರಮನೆ, ಸಮೀಪದ ಹೆಲಿಪ್ಯಾಡ್ ಜಾಗ, ಸರ್ವೇ ನಂಬರ್ 4ರ ಸುಮಾರು 1200 ಎಕರೆ ಜಾಗ, ವಿಜಯಶ್ರೀಪುರದ ಮನೆಗಳು, ವಸ್ತು ಪ್ರದರ್ಶನ ಪ್ರಾಧಿಕಾರದ ಜಾಗ ಎಲ್ಲದರ ಬಗ್ಗೆ ವ್ಯಾಜ್ಯಗಳು ಇವೆ. ಯದುವೀರ್ ಜನಪ್ರತಿನಿಧಿಯಾದ್ರೆ ಆ ಎಲ್ಲ ಜಾಗವನ್ನೂ ಜನರಿಗೆ ಬಿಟ್ಟು ಕೊಡಬೇಕಾಗುತ್ತೆ.ಹೀಗಾಗಿ ಯದುವೀರ್ ಅವರನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.