ಮೈಸೂರು: ಎರಡು ಬಾರಿ ಮೈಸೂರು-ಕೊಡಗು ಸಂಸದನಾಗಿ ಕೆಲಸ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ. ಪ್ರತಾಪ್ ಸಿಂಹ ಬದಲಿಗೆ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಗೆ ಟಿಕೆಟ್ ನೀಡಲಾಗುತ್ತೆ ಎನ್ನಲಾಗುತ್ತಿದೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾತನಾಡಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 1960ರಲ್ಲಿ ನಮ್ಮಪ್ಪ ಜನಸಂಘದಲ್ಲಿ ಇದ್ದರು. ಕರ್ನಾಟಕದಲ್ಲಿ ಎಷ್ಟು ಸಂಸದರ ಪರವಾಗಿ ಹೋರಾಟ ಆಗುತ್ತಿದೆ? ಟಿಕೆಟ್ ಕೊಡಬೇಕು ಅಂತಾ ಜನ ಕೇಳುತ್ತಿದ್ದಾರೆ, ನನಗೆ ಅಷ್ಟೇ ಸಾಕು ಎಂದು ಹೇಳಿದರು. ಇನ್ನು ಇದೇ ವೇಳೆ ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಕ್ಕೆ ಟಿಕೆಟ್ ತಪ್ಪುತ್ತಿದೆ’ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಹೆಸರು ಕೆಡಿಸಿಕೊಂಡಿದ್ದಕ್ಕೆ ಇಲ್ಲಿ ಸೋತು, ಬಾದಾಮಿಗೆ ಹೋದ್ರಾ..? ನಂತರ ಬಾದಾಮಿಯಲ್ಲಿ ಹೆಸರು ಕೆಡಿಸಿಕೊಂಡಿದ್ದಕ್ಕೆ ಇಲ್ಲಿಗೆ ಬಂದ್ರಾ? ಸಿದ್ದರಾಮಯ್ಯ ಹಿರಿಯ ನಾಯಕ, ಈ ರೀತಿ ಮಾತನಾಡಬಾರದು. ಅವರು ಎಷ್ಟು ಚುನಾವಣೆಯಲ್ಲಿ ಸೋತಿಲ್ಲ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.