ಮೈಸೂರು : ಎರಡು ಬಾರಿ ಮೈಸೂರು-ಕೊಡಗು ಸಂಸದನಾಗಿ ಕೆಲಸ ಮಾಡಿದ್ದ ಸಂಸದ ಪ್ರತಾಪ್ ಸಿಂಹ ಗೆ ಈ ಬಾರಿ ಟಿಕೆಟ್ ಕೈತಪ್ಪಿ ಹೋಗಿದೆ. ಪ್ರತಾಪ್ ಸಿಂಹ ಬದಲಿಗೆ ರಾಜ ವಂಶಸ್ಥ ಯದುವೀರ ಒಡೆಯರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಲಾಗಿದೆ. ನಿನ್ನೆ ಯದುವೀರ ಅವರಿಗೆ ಟಿಕೆಟ್ ಘೋಷಣೆ ಬಳಿಕ ಪ್ರತಾಪ್ ಸಿಂಹ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ ಎಂದಿದ್ದರು. ಇದೀಗ ನಾನು ಮಾಜಿಯಾದರು ಕೆಲಸಕ್ಕಾಗಿ ಕರೆ ಮಾಡಿ ಎಂದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.
ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನ್ನ ಪ್ರೀತಿಯ ಕಾರ್ಯಕರ್ತರೇ ಮತ್ತು ಕೊಡಗು-ಮೈಸೂರಿನ ಬಂಧುಗಳೇ, ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ ಕರೆ ಮಾಡುವುದು ಎಂದು ಅಂಜಬೇಡಿ, ಈಗಲೂ ಮತ್ತು ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡುತ್ತೇನೆ. ಸೋಮವಾರದಿಂದ ಪ್ರಚಾರ ಕಾರ್ಯಕ್ಕೆ ಬರುತ್ತೇನೆ ಎಂದು ಬರೆದುಕೊಂಡಿದ್ದಾರೆ.