ನವದೆಹಲಿ : ಭಾರಿ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಶನಿವಾರ ಅಂದರೆ ನಾಳೆ ವೇಳಾಪಟ್ಟಿ ಪ್ರಕಟಿಸಲಿದೆ. ಚುನಾವಣಾ ಆಯೋಗವು ಮಾರ್ಚ್ 16ರ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದು, ಈ ವೇಳೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಪ್ರಕಟಿಸಲಿದೆ. ನಾಲ್ಕು ರಾಜ್ಯಗಳು ಕೂಡ ಇದೇ ವೇಳೆ ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದು, ಚುನಾವಣಾ ಆಯೋಗವು ಈ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಿದೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ರಾಜಧಾನಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.