ಶಿವಮೊಗ್ಗ : ರಾಜ್ಯದಲ್ಲಿ 25-26 ಕ್ಷೇತ್ರಗಳಲ್ಲಿ ಗೆದ್ದು ನಿಮ್ಮನ್ನು ನೋಡಲು ಲೋಕಸಭೆಗೆ ಬರುತ್ತೇವೆ ಅಂತ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತು ಕೊಟ್ಟಿದ್ದೇನೆ. ಒಂದೆರಡು ಆಚೆ, ಈಚೆ ಆಗಬಹುದು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಗೆದ್ದು ಆಗಿದೆ. ಆದರೆ ಹೆಚ್ಚಿನ ಅಂತರಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷಕ್ಕೆ ಜನ ಆಶೀರ್ವಾದ ಮಾಡುತ್ತಾರೆಂದು ವಿಶ್ವಾಸವಿದೆ. ನನ್ನ ಅವಶ್ಯಕತೆ ಎಲ್ಲಿದೆ ಆ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡುತ್ತೇನೆ ಎಂದರು. ಅಲ್ಲದೆ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ಗೆ ಟಿಕೆಟ್ ತಪ್ಪಲು ನಾನು ಕಾರಣ ಅಲ್ಲ. ಬಿಜೆಪಿಯ ಕೇಂದ್ರ ಚುನಾವಣೆ ಸಮಿತಿ ಟಿಕೆಟ್ ನಿರ್ಧಾರ ಮಾಡಿದೆ. ಈಶ್ವರಪ್ಪ ಪಕ್ಷ ಕಟ್ಟಿ ಬೆಳೆಸಿದವರು, ಮನಸ್ಸಿಗೆ ನೋವಾಗಿರಬಹುದು. ರಾಜ್ಯ ನಾಯಕರು ಈಶ್ವರಪ್ಪ ಜತೆ ಮಾತಾಡುವ ಪ್ರಯತ್ನ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಎಲ್ಲರೂ ಬರುತ್ತಾರೆ. ಕಾರ್ಯಕ್ರಮಕ್ಕೆ ಬಂದು ಕೆ.ಎಸ್.ಈಶ್ವರಪ್ಪ ಮಾತನಾಡುವ ವಿಶ್ವಾಸ ಇದೆ. ಅವರನ್ನು ಮತ್ತೆ ಕರೆತರುವ ಪ್ರಯತ್ನ ಪಕ್ಷದ ಹಿರಿಯರು ಮಾಡುತ್ತಿದ್ದಾರೆ. ತಮ್ಮ ಮನಸ್ಸಿಗೆ ಆದ ನೋವಿನಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಅಂದಿದ್ದಾರೆ. ಟಿಕೆಟ್ ವಿಚಾರದಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.