ಶಿವಮೊಗ್ಗ : ತನ್ನ ಪುತ್ರ ಕೆಇ ಕಾಂತೇಶ್ ಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣದಿಂದ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶಗೊಂಡಿರುವ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರಗೆ ಸೋಲಿನ ಭೀತಿ ಎದುರಾಗಿದ್ದು, ಬಿಜೆಪಿ ನಾಯಕರು ಈಶ್ವರಪ್ಪ ಅವರ ಮನವೊಲಿಕೆಗೆ ಹರಸಾಹಸ ಪಡುತ್ತಿದ್ದಾರೆ.
ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಕ್ಷೇತ್ರಕ್ಕೆ ಆಗಮಿಸಲಿದ್ದು, ಇದಕ್ಕೂ ಮುನ್ನ ಈಶ್ವರಪ್ಪ ಅವರ ಮನವೊಲಿಸಲು ರಾಜ್ಯ ಬಿಜೆಪಿ ನಾಯಕರು ಹರಸಾಹಸ ಪಡುತ್ತಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಈಶ್ವರಪ್ಪ ನಿವಾಸಕ್ಕೆ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿಎಸ್ ಅರುಣ್ ಮತ್ತು ರವಿಕುಮಾರ್ ಭೇಟಿ ನೀಡಿದ್ದಾರೆ.
ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಈಶ್ವರಪ್ಪ ಜೊತೆ ಒಂದು ಗಂಟೆ ಮಾತುಕತೆ ನಡೆಸಿ ಸಂಧಾನಕ್ಕೆ ಯತ್ನಿಸಿದ್ದಾರೆ.ಆದರೆ, ಸಂಧಾನಕಾರರ ಮನವಿಗೆ ಈಶ್ವರಪ್ಪ ಸ್ಪಂದಿಸಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಬಿಜೆಪಿ ನಾಯಕರು ಈಶ್ವರಪ್ಪ ನಿವಾಸದಿಂದ ವಾಪಸ್ ಹೋಗಿದ್ದಾರೆ.