ಬೆಂಗಳೂರು : ಪುತ್ರ ಕೆಇ ಕಾಂತೇಶ್ಗೆ ಹಾವೇರಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸುತ್ತಿದ್ದಾರೆ. ಪಕ್ಷವನ್ನು ಯಡಿಯೂರಪ್ಪ ಮತ್ತು ಮಕ್ಕಳ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಶಿವಮೊಗ್ಗದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ. ಆದರೆ, ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರ ಎರಡೂ ತಂಡದ ಸಂಧಾನ ವಿಫಲವಾಗಿದೆ. ಈ ನಡುವೆ ಈಶ್ವರಪ್ಪ ಮಾಡಿದ ಆರೋಪಗಳಿಗೆ ವಿಜಯೇಂದ್ರ ಕೌಂಟರ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲದಕ್ಕೂ ಕ್ಷೇತ್ರದ ಜನರು, ರಾಜ್ಯದ ಜನ ಉತ್ತರ ಕೊಡುತ್ತಾರೆ. ನಾನು ಹೆಚ್ಚಿಗೆ ಮಾತಾಡಲು ಇಷ್ಟ ಪಡಲ್ಲ. ಯಾರೋ ಒಬ್ಬರ ಮಾತು ಕೇಳಿ ನಮ್ಮ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ. ಕೇಂದ್ರದ ವರಿಷ್ಠರು ಎಲ್ಲರೂ ಕೂತು ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಎಲ್ಲರ ಒಮ್ಮತದ ತೀರ್ಮಾನದಿಂದ ಅಭ್ಯರ್ಥಿ ಘೋಷಣೆ ಆಗಿದೆ. ಒಬ್ಬರ ತೀರ್ಮಾನದಿಂದ ಅಭ್ಯರ್ಥಿಗಳ ಆಯ್ಕೆ ಆಗಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರು ಕಾಂತೇಸ್ಗೆ ಟಿಕೆಟ್ ತಪ್ಪಿಸಿದ್ದಾರೆ ಎನ್ನುವ ಈಶ್ವರಪ್ಪ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.