ಬೆಂಗಳೂರು : ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ತಪ್ಪಿದೆ. ಪಕ್ಷದ ಈ ನಿರ್ಧಾರದಿಂದ ಡಿವಿ ಸದಾನಂದಗೌಡ ಅವರು ಬೇಸರಗೊಂಡಿದ್ದಾರೆ. ಅಲ್ಲದೆ ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಡಿವಿ ಸದಾನಂದಗೌಡ ಅವರನ್ನು ಸಂಪರ್ಕಿಸುತ್ತಿದ್ದು, ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ನನ್ನನ್ನು ಸಂಪರ್ಕ ಮಾಡುತ್ತಿದ್ದಾರೆ. ಬೇರೆ ಬೇರೆ ಸಂಗತಿಗಳು ನಡೀತಿವೆ ಎಂದರು.
ನಿನ್ನೆ ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು, ಸಾಂತ್ವನ ಮಾಡಿರುವುದು ನಿಜ. ಮುಂದಿನ ನಿರ್ಧಾರ ನನ್ನ ಕುಟುಂಬಸ್ಥರ ಜತೆ ಚರ್ಚಿಸಬೇಕು. ದೆಹಲಿಯಲ್ಲಿ, ರಾಜ್ಯದಲ್ಲಿ ಒಂದಷ್ಟು ವಿದ್ಯಮಾನ ನಡೆದಿವೆ. ನಿಮಗೆ ಟಿಕೆಟ್ ಅಂದರು, ಕೊನೆ ಕ್ಷಣದಲ್ಲಿ ರಕ್ಷಣೆಗೆ ಬರಲಿಲ್ಲ. ಕೆಲವೊಂದು ಮನದಾಳದ ವಿಚಾರವನ್ನ ಹೇಳಿಕೊಳ್ಳಬೇಕಿದೆ. ಇವತ್ತು ನನ್ನ ಜನ್ಮದಿನ, ಇಡೀ ದಿನ ಕುಟುಂಬದ ಸದಸ್ಯರ ಜತೆ ಕಳೆದು ನಂತರ ನಿಶ್ಚಯ ಮಾಡುತ್ತೇನೆ. ನನ್ನ ನಿರ್ಧಾರಗಳನ್ನು ನಾನು ನನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಬೇಕು. ನನ್ನ ನಿರ್ಣಯ ಬಗ್ಗೆ ನಾಳೆ ಸುದ್ದಿಗೋಷ್ಠಿ ಕರೆದು ತಿಳಿಸುತ್ತೇನೆ ಎಂದು ಹೇಳಿದರು.