ಪ್ರತಿನಿಧಿವರದಿ ಮಳವಳ್ಳಿ
ತಾಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಫೆಬ್ರವರಿ ಮತ್ತು ಮಾರ್ಚಿ ತಿಂಗಳಲ್ಲಿ ಸರಣಿಯಾಗಿ ಹಬ್ಬಗಳ ಆಚರಣೆಗಳು ಜನರಲ್ಲಿ ಕೋಮು ಸೌಹಾರ್ದತೆ ಸಂಕೇತವಾಗಿ ಜರುಗಲಿದ್ದು, ಆ ನಿಟ್ಟಿನಲ್ಲಿ ತಾಲೂಕಿನ ದೊಡ್ಡಬೂಹಳ್ಳಿ, ಕಲ್ಯಾಣಿಕೊಪ್ಪಲು, ಕ್ಯಾತನಹಳ್ಳಿ ಮೂರು ಗ್ರಾಮಗಳಲ್ಲಿ ವಿವಿಧ ಸಮುದಾಯದವರು ಒಗ್ಗೂಡಿ 18 ದಿನಗಳಕಾಲ ಆಚರಿಸುವ ಗ್ರಾಮದೇವತೆಗಳಾದ ಬಲಿಯಮ್ಮ ಮತ್ತು ಹೆಬ್ಬಳದ ಅರಸಮ್ಮ ದೇವಿಯ(ಎತ್ನಟ್ಟಿ ಹಬ್ಬವೆಂದು ಕರೆಯಲಾಗುತ್ತದೆ) ಹಬ್ಬಕ್ಕೆ ಮಾ.17 ರಿಂದ ಚಾಲನೆ ದೊರೆತಿದೆ.
ಅನಾದಿ ಕಾಲದಿಂದ ಈ ಮೂರು ಗ್ರಾಮಗಳಲ್ಲಿ ಬಹಳ ಕಟ್ಟುನಿಟ್ಟಿನಿಂದ ಗ್ರಾಮ ದೇವತೆಯ ಎತ್ನಟ್ಟಿ ಹಬ್ಬವನ್ನು ಸಾಂಪ್ರದಾಕವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷದಂತೆ ಯಾಜಮಾನರು ಹಾಗೂ ಮುಖಂಡರು ಹಬ್ಬ ಆಚರಣೆಗೂ ಪೂರ್ವದಲ್ಲಿ ಒಂದೆಡೆ ಸಭೆಸೇರಿ ಚರ್ಚಿಸಿ ಸಂಪ್ರದಾಯದಂತೆ ಏನೇನು ನಡೆಯಬೇಕೆಂಬುದರ ಬಗ್ಗೆ ಒಮ್ಮತದ ನಿರ್ಣಯದ ಒಪ್ಪಿಗೆ ಪಡೆಯಲಾಗಿತ್ತು. ಅದರಂತೆ ಹಬ್ಬ ಆಚರಣೆಯ ಬಗ್ಗೆ ಮಾ.17 ರಂದು ಸಾಂಕೇತಿಕವಾಗಿ ಮೂರು ಗ್ರಾಮಗಳಲ್ಲಿ ಡಂಗೂರ ಸಾರಿಸುವುದರ ಜತೆಗೆ ಮೇಕೆ ಮರಿ ಹೊಯ್ಯುವ ಸಾಂಪ್ರದಾಯಕ ಪೂಜೆ ನೆರವೇರಿಸಿ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಇಲ್ಲಿನ ವಿಶೇಷವೆಂದರೆ ಡಂಗೂರು ಸಾರಿಸಿದ ದಿನದಿಂದ ಮೂರು ಗ್ರಾಮಗಳ ಪ್ರತಿ ಮನೆಗಳಲ್ಲಿ 10 ದಿನಗಳು ಒಗ್ಗರಣೆ ಹಾಕದೆ ಅಡುಗೆ ತಯಾರಿಸಿಕೊಂಡು ಸೇವಿಸಬೇಕು. ಇದನ್ನು ಇಲ್ಲಿನ ಗ್ರಾಮಗಳ ಎಲ್ಲಾ ಕೋಮಿನ ಗ್ರಾಮಸ್ಥರು ಇದನ್ನು ಕಟ್ಟುನಿಟ್ಟಿನಿಂದ ಪಾಲಿಸುತ್ತಾರೆ.
ಪ್ರತಿದಿನ ಒಂದೊಂದು ಪೂಜಾ ಕೈಂಕರ್ಯಗಳು ಜರುಗಲಿದ್ದು, ಅವುಗಳಲ್ಲಿ ಪ್ರಮುಖವಾಗಿ ಮಾ. 19 ರಂದು ಮೂರು ಗ್ರಾಮಗಳ ನಡುವೆ ನಿರ್ಜನ ಪ್ರದೇಶದ ಕದಬಳ್ಳಿ ಎಂಬ ಸ್ಥಳದಲ್ಲಿರುವ ಹೆಬ್ಬಳದ ಅರಸಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಂಡಿ ಉತ್ಸವ, (ದನಗಳಿಗೆ ಗಾಡಿ ಬಂಡಿ ಕಟ್ಟಿಕೊಂಡು ಓಡಿಸುವುದು) ಮಾ, 24 ಗೊಡ್ಡುಕುಯ್ಯುವ ಸಂಪ್ರದಾಯ, ಮಾ.25, ಹೂವಿನ ಕುಕ್ಕೆ ಉತ್ಸವ , ಮಾ, 26 ಬಲಿವಾರ ಹೆಬ್ಬಳದ ಅರಸಮ್ಮದೇವಸ್ಥಾನದಲ್ಲಿ ಹರಕೆ ಹೊತ್ತ ಭಕ್ತರು ಹರಕೆ ತೀರಿಸುವುದು. ಮಾ, 27 ಕಲ್ಯಾಣಿಕೊಪ್ಪಲು ಗ್ರಾಮದಲ್ಲಿ ಮಾ.28 ದೊಡ್ಡ ಬೂಹಳ್ಳಿ, ಮಾ. 29 ರಂದು ಕ್ಯಾತನಹಳ್ಳಿ ಗ್ರಾಮದಲ್ಲಿ ಸರದಿಯಂತೆ ದೇವರ ಕರಗ ಉತ್ಸವ ಕಾರ್ಯಕ್ರಮ ಡೊಳ್ಳು, ನಗಾರಿ, ತಮಟೆ ಹಾಗೂ ಮಂಗಳ ವಾದ್ಯದೊಡನೆ ವಿಜೃಂಬಣೆಯಿಂದ ನೆರವೇರಲಿದ್ದು, ಈ ಮೂರು ದಿನಗಳ ನಡೆಯುವ ಉತ್ಸವವೇ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು, ಆಯಾ ಗ್ರಾಮಗಳಲ್ಲಿ ನಡೆಯುವ ದೇವರ ಉತ್ಸವದ ದಿನದಂದು ನೆಂಟರಿಷ್ಟರು ನೂರಾರು ಸಂಖ್ಯೆಯಲ್ಲಿ ಭಾಗಿಯಾಗುವರು. ಮಾ. 31 ಕದಬಳ್ಳಿ ಮಾರಮ್ಮನ ಮಡೆ, ಏ. 1 ಕದಬಳ್ಳಿ ಬಸವೇಶ್ವರಕೊಂಡೋತ್ಸವ, ಏ. 3 ಮಾದಪಟ್ಟಣಮಾರಮ್ಮನ ದೇವಸ್ಥಾನಕ್ಕೆ ತಂಪು ಸಲ್ಲಿಸುವ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ.
21 ಎಂಎಲ್ವಿ್ 2
ಮಳವಳ್ಳಿ ತಾಲೂಕಿನ ದೊಡ್ಡಬೂಹಳ್ಳಿ ಗ್ರಾಮದಲ್ಲಿ ಎತ್ನಟ್ಟಿ ಹಬ್ಬದ ಪ್ರಯುಕ್ತ ಬಂಡಿ ಉತ್ಸವವನ್ನು ನಡೆಸುವ ಮೂಲಕ ಭಕ್ತರು ಸಂಭ್ರಸಿದರು.
21 ಎಂಎಲ್ವಿ 3
ಹೆಬ್ಬಳದ ಅರಸಮ್ಮ ದೇವಿ