ಬೆಂಗಳೂರು : ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಬೆಂಗಳೂರು ನಗರದಲ್ಲಿ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣೆ ಸಂಬಂಧ ದುಡ್ಡು ಸಾಗಾಣೆ, ಅನಧಿಕೃತ ಚಟುವಟಿಕೆಗಳ ಮೇಲೆ ನಿಗಾ ಇಡಲು ಚುನಾವಣಾ ಆಯೋಗ ಹದ್ದಿನ ಕಣ್ಣಿಡಲು ಚೆಕ್ ಪೋಸ್ಟ್ ನಿರ್ಮಾಣ ಮಾಡಿದೆ. ಹಾಗೂ ಮತ್ತೊಂದೆಡೆ ರೈಲ್ವೇ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ರೈಲ್ವೆ ಇಲಾಖೆ ಪೊಲೀಸರಿಗೆ ಮಾರ್ಗಸೂಚಿ ನೀಡಲಾಗಿದೆ. ಆರ್ಪಿಎಫ್ ಮತ್ತು ರೈಲ್ವೆ ಪೊಲೀಸರು ಚುನಾವಣಾ ಚೆಕ್ ಪೋಸ್ಟ್ ನಿರ್ಮಿಸಿದ್ದು ರಾಜ್ಯಾದ್ಯಂತ ಹೊರ ರಾಜ್ಯದಿಂದ ಬರುವ ರೈಲ್ವೆ ಬೋಗಿಗಳ ತಪಾಸಣೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ ರೈಲ್ವೆ ನಿಲ್ದಾಣಗಳಲ್ಲಿಯೂ ಪ್ರತಿಯೊಬ್ಬರ ಲಗೇಜ್ ಪರಿಶೀಲನೆ ಮಾಡಲಾಗುತ್ತಿದೆ. ರೈಲ್ವೆ ಇಲಾಖೆ ಪೊಲೀಸರು ಮದ್ಯ ಹಾಗು ಹಣ ಸಾಗಾಣೆ ಬಗ್ಗೆ ಕಟ್ಟೆಚ್ಚರ ವಹಿಸಿದ್ದಾರೆ.