ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪೆರಿಫೆರಲ್ ರಿಂಗ್ ರಸ್ತೆಗೆ ಡಿಪಿಆರ್ ಸಿದ್ಧಪಡಿಸುವ ಟೆಂಡರ್ ಪ್ರಕ್ರಿಯೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಚುನಾವಣೆ ಬಳಿಕ ಮೈಸೂರಿನ ಪೆರಿಫೆರಲ್ ರಿಂಗ್ ರಸ್ತೆ ಹೇಗಿರಬೇಕು ಎಂಬ ನೀಲನಕ್ಷೆ ಸಿದ್ಧವಾಗಲಿದೆ. ನಗರ ದಿನೇದಿನೆ ಬೆಳವಣಿಗೆ ಹೊಂದುತ್ತಿದೆ. ಇದರಿಂದ ರಿಂಗ್ ರಸ್ತೆಯ ಮೇಲಿನ ಒತ್ತಡವೂ ಹೆಚ್ಚಾಗುತ್ತಿದೆ. ಹೀಗಾಗಿ ನಗರದ ಸಂಚಾರ ದಟ್ಟಣೆ ನಿರ್ವಹಣೆಯ ದೃಷ್ಟಿಯಿಂದ ಪೂರ್ವಭಾವಿಯಾಗಿ ನಗರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ರಾಜ್ಯ ಸರಕಾರದ ಬಜೆಟ್ನಲ್ಲಿ ಈ ಯೋಜನೆಗೆ ಸಂಬಂಧಿಸಿದ ಕಾರ್ಯ ಸಾಧ್ಯತೆ ವರದಿ ಸಿದ್ಧಪಡಿಸಲು ಸೂಚನೆ ನೀಡಲಾಗಿತ್ತು. ಆ ನಿಟ್ಟಿನಲ್ಲಿ ಮುಡಾ ವತಿಯಿಂದ ಕ್ರಮ ವಹಿಸಲಾಗುತ್ತಿದೆ.