ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ದೇಶದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಮತಕ್ಕಾಗಿ ಜನರಿಗೆ ಆಮಿಷವೊಂಡುವುದನ್ನು ತಡೆಯಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅಕ್ರಮ ಹಣ-ಹೆಂಡೆ ಹಾಗೂ ವಸ್ತುಗಳನ್ನು ಹಂಚುವುದು ಮತ್ತು ಸಾಗಾಟದ ಮೇಲೆ ಕಣ್ಣಿಟ್ಟಿದೆ. ನಾಕಾ ಬಂದಿಗಳನ್ನು ಹಾಕಿದೆ. ನಾಕಾ ಬಂದಿಗಳಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಹಗಲು-ರಾತ್ರಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಸುಲ್ತಾನ್ಪೇಟೆ ಚೆಕ್ ಪೋಸ್ಟ್ ಮೂಲಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ ಮೌಲ್ಯದ 1,536 ರೇಷ್ಮೆ ಸೀರೆಗಳು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿ ವಾಣಿಜ್ಯ ತೆರಿಗೆ ಜಾರಿ ವಿಭಾಗದ ಜಂಟಿ ಆಯುಕ್ತ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.90 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಬಾದಾಮಿ ತಾಲೂಕಿನ ಜಾಲಿಹಾಳ ಚೆಕ್ಪೋಸ್ಟ್ ಒಂದರಲ್ಲೇ 2.90 ಲಕ್ಷ ರೂ. ಮತ್ತು ಬೂದನಗುಡ್ಡ ರೋಡ್ ಚೆಕ್ಪೋಸ್ಟ್ನಲ್ಲಿ 1 ಲಕ್ಚ ರೂ. ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.