ಮೈಸೂರು: ಮುಖ್ಯಮಂತ್ರಿಯಾಗಿದ್ದಾಗ ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ತಾವು ಗೆಲ್ಲುತ್ತಾರೆಯೇ ಎಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಟಾರ್ ಚಂದ್ರು ಮಂಡ್ಯ ಕ್ಷೇತ್ರಕ್ಕೆ ಅಪರಿಚಿತರಲ್ಲ, ಅವರು ನಾಗಮಂಗಲದವರು ಮತ್ತು ಯಾವ ದೃಷ್ಟಿಯಿಂದಲೂ ವೀಕ್ ಕ್ಯಾಂಡಿಡೇಟ್ ಅಲ್ಲ ಎಂದು ಹೇಳಿದರು. 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ್ಯೂ ತಮ್ಮ ಮಗನನ್ನು ಗೆಲ್ಲಿಸಲಾಗದ ಕುಮಾರಸ್ವಾಮಿ ಈಗ ಗೆಲ್ಲುತ್ತಾರಂತೆಯೇ? ಅವರು ಎಷ್ಟೇ ಭಾವನಾತ್ಮಕವಾಗಿ ಮಾತಾಡಿದರೂ ಮಂಡ್ಯದಲ್ಲಿ ಗೆಲ್ಲಲಾಗಲ್ಲ. ಹಾಸನದವರಾಗಿರುವ ಕುಮಾರಸ್ವಾಮಿಗೆ ಮಂಡ್ಯ ಹೇಗೆ ಕರ್ಮಭೂಮಿಯಾದೀತು ಅಂತ ಸಿದ್ದರಾಮಯ್ಯ ಪ್ರಶ್ನಿಸಿದರು.